ನ್ಯೂಸ್ ನಾಟೌಟ್: ಮಹಿಳೆ ಜತೆಗಿನ ಅಕ್ರಮ ಸಂಬಂಧದ ಚಕ್ರವ್ಯೂಹದೊಳಗೆ ಸಿಲುಕಿಕೊಂಡಿರುವ ಪುತ್ತೂರಿನ ಹಾಲಿ ಶಾಸಕ ಸಂಜೀವ ಮಠಂದೂರಿಗೆ ಪ್ರಸಕ್ತ ಸಾಲಿನಲ್ಲಿ ಬಿಜೆಪಿಯಿಂದ ಟಿಕೇಟ್ ಸಿಗುವ ಸಾಧ್ಯತೆ ಕ್ಷೀಣಿಸಿದೆ. ಹಾಗಾದರೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾರು? ಅನ್ನುವ ಪ್ರಶ್ನೆ ಎದ್ದಿದೆ. ಮತ್ತೊಂದು ಕಡೆ ಸುಳ್ಯದಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ ಅನ್ನುವ ಕುತೂಹಲಗಳು ಕೂಡ ಗರಿಗೆದರಿವೆ.
ಮೂಲಗಳ ಪ್ರಕಾರ ಬಿಜೆಪಿ ಹೈಕಮಾಂಡ್ ಪುತ್ತೂರು ಮತ್ತು ಸುಳ್ಯದಲ್ಲಿ ಯುವಕರಿಗೆ ಮಣೆ ಹಾಕುವುದು ಖಚಿತ ಎನ್ನಲಾಗುತ್ತಿದೆ. ಪುತ್ತೂರಿನಲ್ಲಿ ಸಾಮಾಜಿಕ ನ್ಯಾಯದ ಆಧಾರದಲ್ಲಿ ಜಿಲ್ಲೆಯಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಒಕ್ಕಲಿಗ ಸಮುದಾಯಕ್ಕೆ ಅವಕಾಶ ಕಲ್ಪಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪೈಪೋಟಿ ನಡೆಸುತ್ತಿವೆ.
ಈ ಹಿನ್ನೆಲೆಯಲ್ಲಿ ಪುತ್ತೂರಿನಿಂದ ಯತೀಶ್ ಆರ್ವಾರ್ ಹೆಸರು ಮುಂಚೂಣಿಯಲ್ಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಇನ್ನೆರಡು ದಿನಗಳಲ್ಲಿ ಯತೀಶ್ ಆರ್ವಾರ್ ಹೆಸರು ಘೋಷಣೆಯಾಗುವುದು ಖಚಿತ ಎನ್ನಲಾಗುತ್ತಿದೆ. ಉಳಿದಂತೆ ಪುತ್ತೂರು ಕ್ಷೇತ್ರಕ್ಕೆ ಕಡಬದ ಆಶಾ ತಿಮ್ಮಪ್ಪ, ಸುಳ್ಯದ ಹರೀಶ್ ಕಂಜಿಪಿಲಿ ಹೆಸರು ಕೂಡ ಕೇಳಿ ಬರುತ್ತಿದೆ. ಪುತ್ತೂರಿನಿಂದ ಕಾಂಗ್ರೆಸ್ ಪರ ಧನಂಜಯ ಅಡ್ಪಂಗಾಯ, ದಿವ್ಯ ಪ್ರಭಾ ಚಿಲ್ತಡ್ಕ, ಭರತ್ ಮುಂಡೋಡಿ ಹೆಸರು ಕೇಳಿ ಬರುತ್ತಿದೆ. ಸುಳ್ಯದಿಂದ ಅಂಗಾರ ಬದಲಿಗೆ ಜಗದೀಶ್, ಸೀತಾರಾಮ್ ಭರಣ್ಯ, ಭಾಗೀರಥಿ ಮುರುಳ್ಯ ಹೆಸರು ರೇಸ್ನಲ್ಲಿದೆ.
ಪುತ್ತೂರು ಕ್ಷೇತ್ರಕ್ಕೆ ಕೇಳಿ ಬರುತ್ತಿರುವ ಯತೀಶ್ ಆರ್ವಾರ್ ಮೂಲತಃ ಸಂಘ ಪರಿವಾರದ ಹಿನ್ನೆಲೆಯುಳ್ಳವರು. ತಳ ಮಟ್ಟದಿಂದ ಬೆಳೆದ ನಾಯಕ. ಪಕ್ಷದ ಕಾರ್ಯಕರ್ತನಾಗಿ ಗುರುತಿಸಿಕೊಂಡು ಹಲವಾರು ಮಹತ್ತರ ಜವಾಬ್ದಾರಿಗಳನ್ನು ನಿಭಾಯಿಸಿದವರು. ಇದೀಗ ಅವರ ಹೆಸರು ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕೇಳಿ ಬರುತ್ತಿದೆ. ಸಂಘ ಪರಿವಾರದ ಹಿನ್ನೆಲೆಯುಳ್ಳ ಯತೀಶ್ ಅವರನ್ನೇ ಅಭ್ಯರ್ಥಿಯನ್ನಾಗಿಸಬೇಕು ಅನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಹೈ ಕಮಾಂಡ್ ಇದಕ್ಕೆ ಒಪ್ಪಿಗೆ ಸೂಚಿಸಿದರೆ ಯತೀಶ್ ಆರ್ವಾರ್ ಗೆ ಟಿಕೇಟ್ ಫೈನಲ್ ಆಗುವ ಸಾಧ್ಯತೆಗಳಿವೆ.
ಬಿಜೆಪಿ ರಾಷ್ಟ್ರೀಯ ಪಕ್ಷದ ಹಿನ್ನೆಲೆಯನ್ನು ಹೊಂದಿದೆ. ಸಾಮಾನ್ಯ ಪಕ್ಷದ ಕಾರ್ಯಕರ್ತನಿಗೂ ಟಿಕೇಟ್ ಸಿಗುವುದಿದ್ದರೆ ಅದು ಬಿಜೆಪಿಯಲ್ಲಿ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೇಳಿದ್ದರು. ಅದರಂತೆ ಪುತ್ತೂರು ಮತ್ತು ಸುಳ್ಯದಲ್ಲಿ ಯುವಕರಿಗೆ ಮಣೆ ಹಾಕುವುದು ಬಿಜೆಪಿಯ ಪ್ರಮುಖ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.