ನ್ಯೂಸ್ ನಾಟೌಟ್: ಇಡೀ ಲಿಂಗಾಯತ ಸಮುದಾಯವೇ ಭ್ರಷ್ಟವಾಗಿದೆ ಎಂದು ಹೇಳಿಕೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಯಲಂಹಕದಲ್ಲಿ ಭಾನುವಾರ ಚುನಾವಣಾ ಪ್ರಚಾರ ಹಾಗೂ ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಈ ಹಿಂದೆ ಬ್ರಾಹ್ಮಣ ಸಮುದಾಯವನ್ನು ಅಪಹಾಸ್ಯ ಮಾಡಿದ್ದರು. ಅಲ್ಲದೇ ಮುಖ್ಯಮಂತ್ರಿಯಾಗಿದ್ದಾಗ ಲಿಂಗಾಯತ-ವೀರಶೈವ ಸಮಾಜವನ್ನು ಒಡೆಯಲು ಯತ್ನಿಸಿದ್ದರು ಎಂದು ಆರೋಪಿಸಿದರು.
ಬಿಡಿಎ, ಇಂಧನ ಹಾಗೂ ನೀರಾವರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮವೆಸಗಿ ಬೆಂಗಳೂರನ್ನೇ ಲೂಟಿ ಮಾಡಿದ್ದಾರೆಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು. ಸಿದ್ದರಾಮಯ್ಯನವರ ಆಡಳಿತದಲ್ಲಿ ಶಿಕ್ಷಕರ ನೇಮಕಾತಿ, ಪ್ರಶ್ನೆಪತ್ರಿಕೆ ಸೋರಿಕೆ, ರೀಡೂ ಮುಂತಾದ ಹಗರಣಗಳು ನಡೆದಿವೆ. 843 ಎಕರೆ ಭೂಮಿಯನ್ನು ಅಕ್ರಮವಾಗಿ ಸಾಹುಕಾರರಿಗೆ ಬಿಟ್ಟುಕೊಟ್ಟು 8 ಸಾವಿರ ಕೋಟಿ ರೂ. ಹಗರಣ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಎಂದರೆ ಅನ್ಯಾಯ, ಭ್ರಷ್ಟಾಚಾರ, ಅನೀತಿ, ಅಧರ್ಮ. ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ ಕರ್ನಾಟಕದಿದ ದೂರವಿಡಬೇಕಾಗಿದೆ. ಕಾಂಗ್ರೆಸ್ ಮುಕ್ತಕರ್ನಾಟಕ ಮಾಡಬೇಕಾಗಿದೆ. ಕಾಂಗ್ರೆಸ್ ಎಂಬ ಹೆಸರನ್ನು ಶಾಶ್ವತವಾಗಿ ಈ ನೆಲದಿಂದ ಕಿತ್ತು ಹಾಕಬೇಕಾಗಿದೆ. ಕಾಂಗ್ರೆಸ್ನವರು ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ. ಅದಕ್ಕೆ ಯಾವುದೇ ಜೀವ ಇಲ್ಲ. ಅದರಿಂದ ಬೇರೆ ಯಾವುದೇ ಉಪಯೋಗವಿಲ್ಲ. ಚುನಾವಣೆ ಮುಗಿಯುವವರೆಗೂ ಅದು ಗ್ಯಾರಂಟಿ, ಚುನಾವಣೆ ಮುಗಿದ ನಂತರ ಅದು ಗಳಗಂಟಿ ಎಂದು ವಂಗ್ಯವಾಡಿದರು.