ನ್ಯೂಸ್ ನಾಟೌಟ್: ಚುನಾವಣೆ ಎಂಬ ನಾಟಕ ರಂಗದಲ್ಲಿ ಅಳಿದವರೆಷ್ಟೋ ಉಳಿದವರೆಷ್ಟೋ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಟಿಕೇಟ್ ಘೋಷಣೆಯಾಗುತ್ತಲೇ ಹಲವರು ಖುಷಿ ಪಟ್ಟರೆ ಇನ್ನೂ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ರಾಜಕೀಯ ನಿವೃತ್ತಿ ಮಂತ್ರ ಜಪಿಸುತ್ತಿದ್ದಾರೆ.
ಖಡಕ್ ನಿರ್ಧಾರ ಏಕೆ?
ಬಿಜೆಪಿಯಲ್ಲಿ ದೊಡ್ಡ ನಿವೃತ್ತಿಯ ಪರ್ವ ಆರಂಭವಾಗಿದೆ. ಹಿರಿಯ ನಾಯಕ ಈಶ್ವರಪ್ಪ ರಾಜಕೀಯ ನಿವೃತ್ತಿಯ ಪರ್ವಕ್ಕೆ ಬಿಜೆಪಿಯಲ್ಲಿ ನಾಂದಿ ಹಾಡಿದರು. ಈ ಬೆನ್ನಲ್ಲೇ ಇವರ ಅನೇಕ ಬೆಂಬಲಿಗರು ಬಿಜೆಪಿಗೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ಬಂದರು. ಆರ್.ಶಂಕರ್, ಜಗದೀಶ್ ಶೆಟ್ಟರ್ ಕೂಡ ಬಂಡಾಯದ ಸೂಚನೆ ನೀಡಿದ್ದಾರೆ. ಸುಳ್ಯ ಕ್ಷೇತ್ರದಿಂದ ಏಳನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುವ ಟಿಕೇಟ್ ಆಕಾಂಕ್ಷಿಯಾಗಿದ್ದ ಎಸ್. ಅಂಗಾರ ಅವರಿಗೆ ಟಿಕೇಟ್ ಕೈ ತಪ್ಪಿದೆ. ಇದರಿಂದ ತೀವ್ರ ನಿರಾಶೆಗೆ ಒಳಗಾಗಿರುವ ಅಂಗಾರ ಅವರು ರಾಜೀನಾಮೆ ಮುಂದಾಗಿದ್ದಾರೆ. ಈ ನಡುವೆ ಅಂಗಾರ ಅವರ ಅಭಿಮಾನಿಗಳು ಕೂಡ ರಾಜೀನಾಮೆಗೆ ನಿರ್ಧರಿಸಿದ್ದಾರೆ.
ಕಾಂಗ್ರೆಸ್ನಲ್ಲೂ ಕಸಿವಿಸಿ..!
ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ ಕಾಂಗ್ರಸ್ ನಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಿಗೆ ಟಿಕೆಟ್ ನೀಡದಿದ್ದಲ್ಲಿ ಪುತ್ತೂರು ಮಹಿಳಾ ಕಾಂಗ್ರೆಸ್ ನ ಎಲ್ಲ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಮಹಿಳಾ ಕಾಂಗ್ರೆಸ್ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶಾರದ್ ಅರಸ್ ಹೇಳಿದ್ದಾರೆ. ಮಾತ್ರವಲ್ಲ ಶಕುಂತಳಾ ಶೆಟ್ಟಿಯವರು ಪಕ್ಷೇತರರರಾಗಿ ಸ್ಪರ್ಧಿಸಲು ಆಗ್ರಹಿಸುತ್ತೇವೆ ಎಂದಿದ್ದಾರೆ.
ಈ ಕುರಿತು ಪುತ್ತೂರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶಕುಂತಳಾ ಶೆಟ್ಟಿಯವರು ಈ ಹಿಂದೆ ಶಾಸಕಿಯಾಗಿದ್ದಾಗ ಹಲವು ಜನಪರ ಕೆಲಸ ಮಾಡಿದವರು. ಮಹಿಳೆಯರ ಏಳಿಗೆಗಾಗಿ ಶ್ರಮಿಸಿದವರು.ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.ಸಮಾಜದ ಏಳಿಗೆಗಾಗಿ ಶ್ರಮವಹಿಸಿದ್ದಾರೆ. ಮಹಿಳೆಯರ ರಕ್ಷಣೆಗೆ ಮಹಿಳಾ ಪೊಲೀಸ್ ಠಾಣೆಯನ್ನು ಪುತ್ತೂರಿನಲ್ಲಿ ಆರಂಭಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಮಹಿಳೆಯರ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುವ ಮೂಲಕ ಮಹಿಳೆಯರಿಗೆ ಭರವಸೆಯ ಆಶಾಕಿರಣವಾಗಿದ್ದಾರೆ.ಹೀಗಾಗಿ ಅವರಿಂದ ಇನ್ನೂ ಜನಪರ ಕೆಲಸಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.
ಬಿಜೆಪಿಯು ದಕ್ಷಿಣ ಕನ್ನಡದಲ್ಲಿ ಮಹಿಳೆಯರಿಗೆ ಪುತ್ತೂರು ಮತ್ತು ಸುಳ್ಯದಲ್ಲಿ ಅವಕಾಶ ನೀಡಿದೆ. ಆದರೆ ಕಾಂಗ್ರೆಸ್ ಪಕ್ಷ ಮಹಿಳೆಯನ್ನು ಕಡೆಗಣಿಸುವ ಮೂಲಕ ದಕ್ಷಿಣ ಕನ್ನಡದಲ್ಲಿ ಅತೀ ಹೆಚ್ಚು ಇರುವ ಮಹಿಳಾ ಮತದಾರರನ್ನು ಅವಮಾನಿಸುವ ಕೆಲಸದಲ್ಲಿ ತೊಡಗಿದೆ ಎಂದು ಅನಿಸುತ್ತಿದೆ. ಕಾಂಗ್ರೆಸ್ ಹೈ ಕಮಾಂಡ್ ಈ ವಿಷಯದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದರು.
ಒಂದು ವೇಳೆ ಶಕುಂತಳಾ ಶೆಟ್ಟಿಯವರಿಗೆ ಟಿಕೆಟ್ ನಿರಾಕರಣೆ ಮಾಡಿದರೆ ಮಹಿಳಾ ಕಾಂಗ್ರೆಸ್ ಸಮಿತಿಯು ಸಾಮೂಹಿಕ ರಾಜೀನಾಮೆ ನೀಡವುದರ ಜೊತೆಗೆ, ಶಕುಂತಳಾ ಶೆಟ್ಟಿಯವರು ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಒತ್ತಾಯಿಸಲಿದೆ ಎಂದು ಹೇಳಿದರು.