ಸಾಮಾಜಿಕ ಜಾಲತಾಣದಲ್ಲಿ #GoBackAmul, #SaveNandini ಅಭಿಯಾನ
ನ್ಯೂಸ್ ನಾಟೌಟ್: ಗುಜರಾತ್ ಮೂಲದ ಅಮುಲ್ ಸಂಸ್ಥೆ ರಾಜ್ಯ ಪ್ರವೇಶದಿಂದ ಕರ್ನಾಟಕ ಹಾಲು ಒಕ್ಕೂಟದ ಬ್ರ್ಯಾಂಡ್ ನಂದಿನಿಗೆ ಅಪಾಯ ಎದುರಾಗಲಿದೆ ಎಂಬ ಆತಂಕ ಕನ್ನಡಿಗರಲ್ಲಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಹ್ಯಾಶ್ಟ್ಯಾಗ್ ಸಂಘರ್ಷಕ್ಕೆ ಕನ್ನಡಿಗರು ಮುಂದಾಗಿದ್ದಾರೆ. ಅಮುಲ್ ನಿಮಗೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನ ನೀಡುತ್ತದೆ. ಇದು ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಶೀಘ್ರದಲ್ಲೇ ಲಭ್ಯವಿರುತ್ತದೆ. ಕೆಂಗೇರಿಯಿಂದ ವೈಟ್ಫೀಲ್ಡ್ಗೆ, ತಾಜಾತನದ ಹೊಸ ಅನುಭವ ಎಂಬಂತಹ ಜಾಹೀರಾತುಗಳು, ಡಿಜಿಟಲ್ ಬ್ಯಾನರ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಅಮುಲ್ ಮಾಡುತ್ತಿರುವ ಈ ಪ್ರಮೋಶನ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಮುಲ್ ಕರ್ನಾಟಕ ಮಾರುಕಟ್ಟೆಗೆ ಪ್ರವೇಶವನ್ನು ಘೋಷಿಸಿದಾಗಿನಿಂದ #GoBackAmul, #SaveNandini ಎಂಬ ಹ್ಯಾಶ್ಟ್ಯಾಗ್ಗಳು ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿವೆ. ಈ ಹಿಂದೆ ಮಂಡ್ಯದಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ ಅಮುಲ್ ಮತ್ತು ನಂದಿನಿ ನಡುವಿನ ವಿಲೀನಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಾಯಿಸಿದ್ದರು. ಆ ನಂತರ ನಡೆಯುತ್ತಿರುವ ಈ ಬೆಳವಣಿಗೆಗಳು ನಮ್ಮ ರೈತರ ಭವಿಷ್ಯಕ್ಕೆ ಕುತ್ತು ತಂದಿವೆ ಎಂಬ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬಂದಿವೆ.
ಕರ್ನಾಟಕದ ಡೈರಿ ಮಾರುಕಟ್ಟೆಗೆ ಅಮುಲ್ ಪ್ರವೇಶ ಮಾಡುತ್ತಿರುವುದು ಹೈನುಗಾರರನ್ನು ಆತಂಕಕ್ಕೆ ತಳ್ಳಿದೆ. ಇದು ವಿಪಕ್ಷಗಳ ನಾಯಕರು ಮತ್ತು ಕನ್ನಡ ಪರ ಸಂಘಟನೆಗಳನ್ನು ಕೆರಳಿಸಿದೆ. ಅಮುಲ್ ಮತ್ತು ನಂದಿನಿ ಸಂಘರ್ಷದಲ್ಲಿ ನಮ್ಮ ರಾಜ್ಯದ ಬ್ರ್ಯಾಂಡ್ ಸೋಲುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಂದಿನಿಯ ಬ್ರ್ಯಾಂಡ್ ಮೌಲ್ಯ ಉತ್ತೇಜಿಸಲು ಮತ್ತು ಹೆಚ್ಚಿಸಲು ಹಾಲು ಒಕ್ಕೂಟ ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ಹಲವರು ಆರೋಪಿಸಿದ್ದಾರೆ. ಅಮುಲ್ಗಿಂತ ಗುಣಮಟ್ಟದ ಹಾಲನ್ನು ಹೊಂದಿದ್ದರೂ ನಂದಿನಿ ಬ್ರ್ಯಾಂಡ್ನ ಮಾರುಕಟ್ಟೆ ಮತ್ತು ಪ್ರಚಾರದಲ್ಲಿ ನಾವು ತುಂಬಾ ಹಿಂದುಳಿದಿದ್ದೇವೆ. ಅದಕ್ಕಾಗಿಯೇ #SaveNandini ಮುಖ್ಯವಾಗಿದೆ. ಅಮುಲ್ ಹಾಲಿನ ಬಳಕೆಯು ಕೇವಲ ಶೇ.10 ರಷ್ಟಿದ್ದರೂ ಅವರ ಜಾಹೀರಾತು ಶೇ.90ರಷ್ಟಿದೆ. ಇದು ಕರ್ನಾಟಕದ ಹೈನುಗಾರರಿಗೆ ಆತಂಕ ಸೃಷ್ಟಿಸಿದೆ.
ಅಮುಲ್ ಕರ್ನಾಟಕಕ್ಕೆ ಬಂದರೆ ಕನ್ನಡಿಗರಿಗೆ ಧಕ್ಕೆಯಾಗಲಿದೆ. ನರೇಂದ್ರ ಮೋದಿ, ಅಮಿತ್ ಶಾ ಮತ್ತು ಅವರ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಎಚ್ಚರದಿಂದಿರಿ. ಅವರು ಕನ್ನಡಿಗರಿಗೆ ಸೇರಿದ ಎಲ್ಲ ಆಸ್ತಿಗಳನ್ನು ಮಾರುತ್ತಾರೆ. ನಮ್ಮ ಬ್ಯಾಂಕುಗಳನ್ನು ನಾಶಪಡಿಸಿದ ನಂತರ ಈಗ ನಂದಿನಿ ಕೆಎಂಎಫ್ ನಾಶಮಾಡಲು ನಿರ್ಧರಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕನ್ನಡಿಗರು ವಿಲೀನದ ಪರಿಕಲ್ಪನೆಯನ್ನು ವಿರೋಧಿಸುತ್ತಿದ್ದಂತೆ ಅಮುಲ್ ಈಗ ಹಿಂಬಾಗಿಲ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದೆ. ಗುಜರಾತ್ ಮೂಲದ ಅಮುಲ್ ಈ ಹಿಂದೆ ಹಾಲು ಮತ್ತು ಮೊಸರು ಮಾರಾಟ ಮಾಡಲು ಕರ್ನಾಟಕದ ಮಾರುಕಟ್ಟೆಗೆ ಪ್ರವೇಶಿಸಲು ಪ್ರಯತ್ನಿಸಿತ್ತು. ಆಗ ನಾವು ಅದಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ಈಗ ಬಿಜೆಪಿ ಅವರನ್ನು ಮುಕ್ತಕಂಠದಿಂದ ಸ್ವಾಗತಿಸುತ್ತಿದೆ. ಕೆಎಂಎಫ್ನ ಪ್ರತಿನಿತ್ಯ 99 ಲಕ್ಷ ಲೀಟರ್ ಹಾಲಿನ ಸಂಗ್ರಹಣೆ ಈಗ 71 ಲಕ್ಷ ಲೀಟರ್ಗೆ ಕುಸಿದಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.