ನ್ಯೂಸ್ ನಾಟೌಟ್ : ಇಷ್ಟು ದಿನ ನಾಟಕ, ರಂಗಗೀತೆಗಳ ಮೂಲಕ ಕಂಗೊಳಿಸುತ್ತಿದ್ದ ಸುಳ್ಯದ ಹಳೆಗೇಟಿನಲ್ಲಿರುವ ರಂಗಮನೆ ಎ.೦೯ ಆದಿತ್ಯವಾರದಂದು ಮಕ್ಕಳ ಕಲರವದಿಂದ ಹೊಸ ರೂಪ ಪಡೆದುಕೊಂಡಿತ್ತು. ಮಕ್ಕಳ ತೊದಲು ನುಡಿ, ತುಂಟಾಟ, ತರಲೆ-ಹರಟೆಗೆ ಸಾಕ್ಷಿಯಾಯಿತು.ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ರಾಜ್ಯ ಮಟ್ಟದ ಮಕ್ಕಳ ರಂಗ ಶಿಬಿರ ಚಿಣ್ಣರ ಮೇಳ 2023 ಇದರ ಉದ್ಘಾಟನಾ ಕಾರ್ಯಕ್ರಮವು ಇಂದು ನಡೆಯಿತು.
ಕಾರ್ಯಕ್ರಮವನ್ನು ಖ್ಯಾತ ಅಂಕಣಗಾರರು, ಶಿಕ್ಷಕಿ ಶ್ರೀಮತಿ ಕವಿತಾ ಅಡೂರು ಉದ್ಘಾಟಿಸಿದರು.ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಡಳಿತ ಸದಸ್ಯರು ಹಾಗೂ ದಂತ ವೈದ್ಯರಾದ ಡಾ. ವಿದ್ಯಾಶಾರದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ರೂಪಶ್ರೀ ಜೆ.ರೈ, ರಾಜ್ಯ ಸಂಪನ್ಮೂಲ ವ್ಯಕ್ತಿ ಸೃಜನಶೀಲ ಶಿಕ್ಷಕ ಅರವಿಂದ ಕುಡ್ಲ, ಸಾಂಝಿ ಕಲೆ ಖ್ಯಾತಿಯ ಪ್ರತಿಭಾನ್ವಿತ ಶಿಕ್ಷಕ ಎಸ್.ಎಫ್.ಹುಸೇನಿ ಮೈಸೂರು, ಧರ್ಮಸ್ಥಳ ನೀನಾಸಂ ರಂಗ ಪದವೀಧರೆ ಕು.ಸಂಗೀತ ಭಿಡೆ, ರಂಗಮನೆ ಸದಸ್ಯೆ ಶ್ರೀಮತಿ ವಿನೋದಿನಿ ಎನ್.ರೈ, ಶಿಬಿರ ಸಂಚಾಲಕ ಶ್ರೀ ಹರಿ ಪೈಂದೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಂಗಮನೆ ರೂವಾರಿ ಜೀವನ್ ರಾಂ ಸುಳ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು.ಸಿಂಚನ ಸರಸ್ವತಿ ಪ್ರಾರ್ಥಿಸಿದರು. ಶಿಬಿರದ ಸಂಚಾಲಕ ರವೀಶ ಪಡ್ಡಂಬೈಲು ವಂದಿಸಿದರು. ಶಿಬಿರದ ಸಂಚಾಲಕ ಪ್ರಸನ್ನ ಐವರ್ನಾಡು ಕಾರ್ಯಕ್ರಮ ನಿರೂಪಿಸಿದರು. ಕು. ಸುಶ್ಮಿತಾ ಮೋಹನ್ ರಂಗಮನೆ, ಕು.ಲಾಲಿತ್ಯ ರಂಗಮನೆ ಸಹಕರಿಸಿದರು.
ಶಿಬಿರದಲ್ಲಿ ಸುಮಾರು 170ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು. ಕಲೆ, ಹಾಡು, ಕುಣಿತ, ಚಿತ್ರಕಲೆ ಅದರಲ್ಲೂ ವಿಶೇಷವಾಗಿ ನಾಟಕ ತರಬೇತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು,ರಂಗಾಭಿನಯ, ಕತಾರಚನೆ, ಮಾತುಗಾರಿಕೆ, ರಂಗದಾಟಗಳು, ರಂಗಗೀತೆ, ಕಥಾಭಿನಯ, ಅಭಿನಯಗೀತೆ, ಸ್ವರಾಣುಕರಣೆ, ಆತ್ಮವಿಶ್ವಾಸ ಮೂಡಿಸುವ ಗುಂಪು ಚಟುವಟಿಕೆಗಳು, ಪುಸ್ತಕ ಪ್ರೀತಿ, ಅಂದದ ಹಸ್ತಾಕ್ಷರ, ಪರಿಸರ ಪ್ರೀತಿ, ಪಕ್ಷಿ ಪ್ರಪಂಚ, ಬಟ್ಟೆ ಅಧ್ಯಯನ ಇರಲಿದೆ.
ಸಾಕ್ಷ್ಯ ಚಿತ್ರ, ಗಗನ ವಿಜ್ಞಾನ, ವಿಜ್ಞಾನದ ಸರಳ ಮಾದರಿಗಳು, ಭಿತ್ತಿಚಿತ್ರ, ಮಕ್ಕಳ ಕಲಾತ್ಮಕ ಚಲನಚಿತ್ರ ಪ್ರದರ್ಶನ, ವಾದ್ಯವೃಂದ, ಜನಪದ ಸಂಗತಿಗಳು, ನಾಟಕ ತಯಾರಿ ಮತ್ತು ಪ್ರದರ್ಶನ ಇದಲ್ಲದೇ ಕ್ರಾಫ್ಟ್- ಚಿತ್ರಕಲೆ, ಗಾಳಿಪಟ, ಮುಖವರ್ಣಿಕೆ ಇನ್ನಿತರ ಹಲವು ವಿಚಾರಗಳು ಇರಲಿದೆ ಎಂದು ತಿಳಿಸಲಾಗಿದೆ. ಶಿಬಿರವು ಎ.16 ರವರೆಗೆ ನಡೆಯಲಿದ್ದು ಚಿಣ್ಣರು ಈ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ.