ನ್ಯೂಸ್ ನಾಟೌಟ್: ಯೂನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ವ್ಯವಹಾರಗಳ ಮೇಲೆ 2023ರ ಎಪ್ರಿಲ್ 1ರಿಂದ 1.1% ಅಂತರ್ಬದಲಾವಣೆ ಶುಲ್ಕ ಬೀಳಲಿದೆ. ಈ ವಿಷಯವನ್ನು ಭಾರತ ರಾಷ್ಟ್ರೀಯ ಪಾವತಿ ನಿಗಮ(ನ್ಯಾಷನಲ್ ಕಾರ್ಪೊರೇಷನ್ ಆಫ್ ಪೇಮೆಂಟ್ ಇಂಟರ್ ಫೇಸ್- NCPI) ಅಧಿಕೃತ ಪ್ರಕಟಣೆ ತಿಳಿಸಿದೆ. ಯುಪಿಐ ವ್ಯವಹಾರಗಳಿಗೆ ಇದು ಅನ್ವಯವಾಗಲಿದ್ದು, ರೂ. 2000/- ಮೇಲಿನ ಹಣ ವರ್ಗಾವಣೆಗೆ ಇದು ಅನ್ವಯವಾಗಲಿದೆ ಮತ್ತು ಇದನ್ನು ವರ್ತಕರು ಭರಿಸಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಯುಪಿಐ ಮೂಲಕ ಪಾವತಿ ಮಾಡುವ ಡಿಜಿಟಲ್ ವ್ಯವಸ್ಥೆ ಸಾರ್ವಜನಿಕರ ಅನುಕೂಲಕ್ಕೆ ಇರುವುದು ಎಂದು ಹಣಕಾಸು ಸಚಿವಾಲಯ ಕಳೆದ ವರ್ಷದ ಆಗಸ್ಟ್ನಲ್ಲಿ ಹೇಳಿತ್ತು. ಯುಪಿಐ ಮೂಲಕ ಮಾಡುವ ಯಾವುದೇ ವ್ಯವಹಾರಕ್ಕೂ ಶುಲ್ಕ ವಿಧಿಸುವುದಿಲ್ಲ ಎಂದು ಅದು ಹೇಳಿತ್ತು. ಆದರೆ ಫಂಡ್ ಟ್ರಾನ್ಸ್ಫರ್ ವ್ಯವಸ್ಥೆಯಾದ ಯುಪಿಐ ಬ್ಯಾಂಕ್ಗಳ IMPSನಂತೆ ತಕ್ಷಣದ ಪಾವತಿ ಸೇವೆ ಇದೆ. ಹೀಗಾಗಿ ಯುಪಿಐ ಮೇಲಿನ ಶುಲ್ಕಗಳು IMPS ಹಣ ವರ್ಗಾವಣೆ ಮೇಲೆ ಹೇರುವ ಶುಲ್ಕಗಳಂತೆಯೇ ಎಂದು ವಾದಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್- ಆರ್ಬಿಐ ಹೇಳಿಕೆ ನೀಡಿತ್ತು. ಇದರ ಬೆನ್ನಲ್ಲೇ ಹಣಕಾಸು ಸಚಿವಾಲಯ ಈ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.
ವರ್ತಕರ ವಿವಿಧ ವಿಭಾಗಗಳಿಗೆ ಇಂಟರ್ ಚೇಂಜ್ ಶುಲ್ಕದಲ್ಲಿ ವ್ಯತ್ಯಾಸ ಇದೆ. ಅದು ಶೇ. 0.5 ರಿಂದ ಶೇ 1.1ರ ವರೆಗೆ ಇರಲಿದೆ. ಕೆಲವು ವಿಭಾಗಗಳಲ್ಲಿ ಒಂದು ಹಂತದ ಮಿತಿಯೂ ಅನ್ವಯವಾಗುತ್ತದೆ. ಸಾಮಾನ್ಯ ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕಗಳನ್ನು ಹೇರಲಾಗುವುದಿಲ್ಲ ಎಂದು ಎನ್ಸಿಪಿಐ ಸ್ಪಷ್ಟಪಡಿಸಿದೆ. ಪಿಪಿಐಗಳನ್ನು ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆ ಆಧಾರಿತ ಯುಪಿಐ ಪಾವತಿಗಳಿಗೆ ಮಾತ್ರ ಇದು ಅನ್ವಯ ಎಂದು ಪ್ರಕಟಣೆ ತಿಳಿಸಿದೆ.ಟೆಲಿಕಾಂ, ಶಿಕ್ಷಣ, ಯುಟಿಲಿಟಿ, ಅಂಚೆ ಕಚೇರಿ ವ್ಯವಹಾರಗಳಿಗೆ ಇಂಟರ್ ಚೇಂಜ್ ಶುಲ್ಕ ಶೇ. 0.7 ಆಗಿರುತ್ತದೆ. ಸೂಪರ್ ಮಾರ್ಕೆಟ್ ಗಳಿಗೆ ವ್ಯವಹಾರ ಮೌಲ್ಯದ ಶೇ. 0.9 ಆಗಿರುತ್ತದೆ. ವಿಮೆ, ಸರ್ಕಾರ, ಮ್ಯೂಚುವಲ್ ಫಂಡ್ ಮತ್ತು ರೈಲ್ವೇ ಗಳಗೆ ಶೇ. 1 ಶುಲ್ಕ ವಿಧಿಸಲಾಗುತ್ತದೆ. ಇಂಧನ ಮತ್ತು ಕೃಷಿಗೆ ಕ್ರಮವಾಗಿ 0.5 ಮತ್ತು 0.7 ಶುಲ್ಕ ಬೀಳಲಿದೆ.