ನ್ಯೂಸ್ ನಾಟೌಟ್ : ವಸತಿ ಕಟ್ಟಡದಲ್ಲಿ ಅಗ್ನಿ ದುರಂತ ದುಬೈಯಲ್ಲಿ ಸಂಭವಿಸಿದೆ. ಅಲ್ ರಾಸ್ ವಸತಿ ಕಟ್ಟಡದ 4ನೇ ಮಹಡಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮಲಯಾಳಿ ದಂಪತಿ ಸಹಿತ ೧೬ ಮಂದಿ ದಾರುಣ ಸಾವನ್ನಪ್ಪಿದ್ದು,9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶನಿವಾರ ಮಧ್ಯರಾತ್ರಿ 12 ಗಂಟೆಗೆ ದುಬೈನ ತಲಾಲ್ ಸೂಪರ್ ಮಾರ್ಕೆಟ್ ಬಳಿ ಇರುವ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ವೆಂಗಾರ ಕಲಂಗದನ್ ಮೂಲದ ರಿಜೇಶ್ (38) ಮತ್ತು ಅವರ ಪತ್ನಿ ಜೇಶಿ ಪ್ರಾಣ ಕಳೆದುಕೊಂಡಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆ ಎಂದು ವರದಿಯಾಗಿದ್ದು, ದಟ್ಟ ಹೊಗೆ ರಿಜೇಶ್ ಅವರು ವಾಸವಿದ್ದ ಕೊಠಡಿಗೂ ವ್ಯಾಪಿಸಿ, ದಂಪತಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮೃತರಲ್ಲಿ ತಮಿಳುನಾಡು ಮೂಲದ ಅಬ್ದುಲ್ ಖಾದರ್ ಮತ್ತು ಸಲಿಯಾಕುಂದ್, ಪಾಕಿಸ್ತಾನದ ಮೂವರು ಮತ್ತು ನೈಜೀರಿಯಾದ ಮಹಿಳೆ ಸೇರಿದ್ದಾರೆ.ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಸಿಬ್ಬಂದಿ ಕೂಡ ಬೆಂಕಿಯಲ್ಲಿ ಮೃತಪಟ್ಟಿದ್ದಾರೆ. ಮೃತರ ಎಲ್ಲ ದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಭಾರತೀಯ ಸಾಮಾಜಿಕ ಕಾರ್ಯಕರ್ತ ನಾಸೀರ್ ವತನಪಲ್ಲಿ ಮಾಹಿತಿ ನೀಡಿದ್ದಾರೆ.