ನ್ಯೂಸ್ ನಾಟೌಟ್ : ಕಾಡಿನಿಂದ ನಾಡಿಗೆ ಕಾಡು ಪ್ರಾಣಿಗಳು ನುಸುಳುತ್ತಿದೆ. ಕೆಲವೊಂದೆಡೆ ಕಾಡ್ಗಿಚ್ಚಿನಿಂದಾಗಿಯೋ ಅಥವಾ ಮನುಷ್ಯನ ಅತಿರೇಕದ ವರ್ತನೆಯಿಂದಾಗಿಯೋ ಅರಣ್ಯ ಪ್ರದೇಶಗಳು ನಾಶದಂಚಿಗೆ ತಲುಪಿವೆ.ಇದರಿಂದ ಕಾಡು ಪ್ರಾಣಿಗಳಿಗೂ ಆಹಾರದ ಕೊರತೆ ಉಂಟಾಗುತ್ತಿದ್ದು,ಅವುಗಳು ನಾಡಿನತ್ತ ಪ್ರಯಾಣ ಬೆಳೆಸುತ್ತಿವೆ.ಹೆಚ್ಚಾಗಿ ಚಿರತೆ,ಆನೆ ಹಾಗೂ ಕಾಡುಕೋಣಗಳ ಉಪಟಳ ಜೋರಾಗಿದೆ.ಆನೆದಾಳಿಗೆ ತುತ್ತಾಗಿ ಮೃತಪಟ್ಟವರ ಸಂಖ್ಯೆಯೂ ಹೆಚ್ಚಿದೆ.ಇದಕ್ಕಾಗಿ ಕೊಡಗಿನಲ್ಲೊಂದು ಪರಿಹಾರ ಕಂಡು ಹುಡುಕಿದ್ದಾರೆ.16 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ತಡೆಗೋಡೆಯಿಂದಾಗಿ ಯಾವುದೇ ಕಾಡುಪ್ರಾಣಿಗಳು ನಾಡಿನತ್ತ ಹೆಜ್ಜೆ ಇಡುತ್ತಿಲ್ಲವೆನ್ನುವ ಅಭಿಪ್ರಾಯ ಕೇಳಿ ಬಂದಿದೆ.
ಕಾಡಾನೆಗಳು ಊರಿನತ್ತ ಬರದ ಹಾಗೆ ಮಾಡಿರುವಂತಹ ಹೊಸ ಯೋಜನೆ ಇದಾಗಿದ್ದು ಯಶಸ್ವಿಯಾಗಿದೆ ಎನ್ನಲಾಗುತ್ತಿದೆ. ಅರಣ್ಯ ಇಲಾಖೆಯು ಸಿಮೆಂಟ್ ಪಿಲ್ಲರ್ ತಡೆಗೋಡೆ ನಿರ್ಮಾಣದ ಪ್ರಯೋಗ ಮಾಡಿದ್ದು 16 ಲಕ್ಷ ರೂ. ಒಟ್ಟು ಖರ್ಚು ತಗುಲಿದೆ.2.25 ಮೀಟರ್ ಎತ್ತರ ಹಾಗೂ 75 ಮೀಟರ್ ಉದ್ದದ ಈ ತಡೆಗೋಡೆ ನಿರ್ಮಾಣವಾಗಿ ಒಂದು ತಿಂಗಳಾಗಿದ್ದು,ಊರಿನತ್ತ ಆನೆಗಳು ಇದುವೆರೆಗೆ ಬಂದಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಹೇಳಿದ್ದಾರೆ.ಕೊಡಗು ಜಿಲ್ಲೆ ಶನಿವಾರಸಂತೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹಿರಿಕರ ಗ್ರಾಮದಲ್ಲಿ ಇಂತಹ ಪ್ರಯೋಗ ನಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಶನಿವಾರಸಂತೆ ಸಮೀಪದ ಅನೇಕ ಗ್ರಾಮದ ರೈತರು ಆನೆಗಳ ಹಾವಳಿಯಿಂದ ಕಂಗೆಟ್ಟಿದ್ದರು.ಕಾಡಾನೆಗಳು ಅಲ್ಲೇ ಸಮೀಪದಲ್ಲಿ ಬೀಡುಬಿಟ್ಟು ಅನೇಕ ರೀತಿಯ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದರು.ತೋಟ-ಗದ್ದೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದವು.ಇದರಿಂದಾಗಿ ರೈತರಿಗೆ ಅಪಾರ ನಷ್ಟ ಸಂಭವಿಸಿದ್ದು, ಕಂಗಾಲಾಗಿದ್ದರು. ಇದಕ್ಕಾಗಿ ಅರಣ್ಯ ಇಲಾಖೆ ಕಂದಕವನ್ನು ನಿರ್ಮಿಸಿದ್ದರೂ ಏನು ಪ್ರಯೋಜನವಾಗಿರಲಿಲ್ಲ. ಹೀಗಾಗಿ ಅರಣ್ಯ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ತಡೆಗೋಡೆ ನಿರ್ಮಿಸಿದೆ.
ಸಿಮೆಂಟ್ ಪಿಲ್ಲರ್ ತಡೆಗೋಡೆಯನ್ನು ಮಾಕುಟ್ಟ ಭಾಗದಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಲಾಗಿದ್ದು ಅದು ಯಶಸ್ವಿಯಾಗಿದೆ ಎಂಬು ಮಾತು ಕೇಳಿ ಬಂದಿದೆ. ಪ್ರಾಯೋಗಿಕವಾಗಿ 75 ಮೀಟರ್ವರೆಗೆ ನಿರ್ಮಿಸಲಾಗಿದ್ದು,ಆನೆಗಳಿಗೆ ಈ ತಡೆಗೋಡೆ ಉರುಳಿಸಲು ಸಾಧ್ಯವಾಗಲಿಲ್ಲ ಅಂತಾರೆ ಶನಿವಾರಸಂತೆಯ ವಲಯ ಅರಣ್ಯಾಧಿಕಾರಿಗಳು.ಕಾಮಗಾರಿ ಫುರ್ಣಗೊಂಡು ಒಂದು ತಿಂಗಳಾದರೂ ಈಗ ಯಾವುದೇ ಪ್ರಾಣಿಗಳು ನಾಡಿನತ್ತ ಹೆಜ್ಜೆಯಿಡುತ್ತಿಲ್ಲ.ರೈತರು ನಿರಾಳರಾಗಿದ್ದಾರೆ ಎಂದು ಹೇಳಿದ್ದಾರೆ.