ನ್ಯೂಸ್ ನಾಟೌಟ್: ಕೆಲವು ದಿನಗಳಿಂದೀಚೆಗೆ ಕರಾವಳಿಯಲ್ಲಿ ಬಿರುಬಿಸಿಲ ಬೇಗೆ ಮಿತಿ ಮೀರಿದೆ. ಸಾಮಾನ್ಯವಾಗಿ 31-33 ಡಿಗ್ರಿ ಆಸುಪಾಸಿನಲ್ಲಿರಬೇಕಾದ ಉಷ್ಣಾಂಶ 37 ಡಿಗ್ರಿ ದಾಖಲಾಗಿದೆ. ಇದೇ ರೀತಿ ಬಿಸಿಲಿನ ಬೇಗೆ ಹೆಚ್ಚಾದರೆ ನೀರಿನ ಆವಿ ಪ್ರಮಾಣವೂ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಇನ್ನೊಂದು ಮಾಹಿತಿ ಪ್ರಕಾರ ಇದೇ ರೀತಿ ಬೇಗೆ ಜಾಸ್ತಿಯಾದರೆ ಬೇಸಿಗೆ ಮಳೆಯ ಮುನ್ಸೂಚನೆ ಇರಬಹುದು ಎನ್ನುತ್ತಾರೆ ಪರಿಸರವಾದಿಗಳು.
ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಒಳಹರಿವು ಒಂದೇ ಸಮನೆ ಕಡಿಮೆಯಾಗಿದ್ದು, ಏಪ್ರಿಲ್ ತಿಂಗಳಾಂತ್ಯದೊಳಗೆ ಬೇಸಿಗೆ ಮಳೆ ಬಾರದಿದ್ದರೆ ನಗರದಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ ಎಂಬ ಆತಂಕ ಮನೆಮಾಡಿದೆ.ಪ್ರಸ್ತುತ ಡ್ಯಾಂನಲ್ಲಿ ಶೇಖರಣೆಯಾಗಿರುವ ನೀರು 50ರಿಂದ 55 ದಿನಕ್ಕಷ್ಟೇ ಪೂರೈಕೆಯಾಗಬಹುದಾಗಿದೆ. ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಶುಕ್ರವಾರ ಸಂಜೆಯ ವೇಳೆಗೆ ನೀರಿನ ಮಟ್ಟ 5.85 ಮೀಟರ್ ಗೆ ಇಳಿಕೆಯಾಗಿದೆ. ಮಹಾನಗರಪಾಲಿಕೆ ಆಡಳಿತ ಮತ್ತು ನಗರದ ಜನತೆ ಈಗಲೇ ಮುಂದಾಲೋಚನೆ ಮಾಡದಿದ್ದರೆ 2019ರಲ್ಲಿ ಆದ ನೀರಿನ ಸಮಸ್ಯೆ ಈ ಬಾರಿಯೂ ನಗರವನ್ನು ಬಿಗಡಾಯಿಸಲಿದೆ ಎಂಬುದು ಗಮನಾರ್ಹ ಅಂಶ.
2019ರ ನೀರಿನ ಬಳಕೆಯನ್ನು ಹೋಲಿಸಿದರೆ ಈ ವರ್ಷಕ್ಕೆ ಶೇ.12ರಷ್ಟು ನೀರಿನ ಬೇಡಿಕೆ ಹೆಚ್ಚಳವಾಗಿದೆ. ಇದರಿಂದ ಈ ಬಾರಿ ಏಪ್ರಿಲ್ ತಿಂಗಳ ಆರಂಭದಲ್ಲಿಯೇ ನೀರಿನ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಅಧಿಕಾರಿಗಳು.