ನ್ಯೂಸ್ ನಾಟೌಟ್: ಜಿಲ್ಲೆಯಲ್ಲಿ ಅಲ್ಲಲ್ಲಿ ಕಾಡ್ಗಿಚ್ಚು ಸುದ್ದಿಗಳು ಕೇಳಿ ಬರುತ್ತಲೇ ಇದೆ. ಇದೀಗ ಕೊಡಗಿನಲ್ಲಿ ಕಾಡ್ಗಿಚ್ಚು ಹಾವಳಿ ಮುಂದುವರಿದಿದೆ. ಭಾಗಮಂಡಲ ಸಮೀಪ ತಾವೂರು, ತಣ್ಣಿಮಾನಿ ಬೆಟ್ಟದಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ ಅವಘಡ ಸಂಭವಿಸಿದೆ.
ಭಾನುವಾರ ಸಂಜೆ ಆಗುತ್ತಿದ್ದಂತೆ ಬೆಟ್ಟ ಶ್ರೇಣಿಯಲ್ಲಿ ಬೆಂಕಿ ವ್ಯಾಪಕವಾಗಿ ಉರಿಯುತ್ತಿರುವ ದೃಷ್ಯ ಭಾಗಮಂಡಲ ಪಟ್ಟಣಕ್ಕೆ ಕಾಣುತ್ತಿತ್ತು. ಬೆಟ್ಟದ ಕೆಳಗಿನ ಸ್ಥಳೀಯ ನೂರಾರು ಎಕರೆ ತೋಟಗಳಿಗೆ ಬೆಂಕಿ ಹರಡುವ ಆತಂಕ ಎದುರಾಗಿದೆ. ಕಡಿದಾದ ಕಾಡು ಪ್ರದೇಶಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದರು. ಬೆಟ್ಟ ಶ್ರೇಣಿಗೆ ಅಗ್ನಿಶಾಮಕ ದಳ ತೆರಳಲು ಸಾಧ್ಯವಿಲ್ಲದ ಕಾರಣ ಕಾಡು ಸೊಪ್ಪು ಬಳಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಡಿ ಎಫ್ ಓ ಪೂವಯ್ಯ ಮಾರ್ಗದಶನದಲ್ಲಿ ಆರ್ ಎಫ್ ಓ ರವೀಂದ್ರ ಹಾಗೂ ಸಿಬ್ಬಂದಿಗಳು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು.
ಇನ್ನು ಇಗ್ಗುತಪ್ಪ ಬೆಟ್ಟದಲ್ಲೂ ಭಾರಿ ಕಾಡ್ಗಿಚ್ಚು ಆವರಿಸಿಕೊಂಡಿದ್ದು, ಅಪಾರ ಅರಣ್ಯ ನಾಶವಾಗಿದೆ. 100 ಎಕ್ರೆಗೂ ಅಧಿಕ ಅರಣ್ಯ ಸಂಪತ್ತು ಅಗ್ನಿಗಾಹುತಿಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಬೆಂಕಿ ನಂದಿಸಲು ಸ್ವಯಂ ಸೇವಕರಿಗೆ ಕೊಡಗು ಅರಣ್ಯ ಇಲಾಖೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.