ನ್ಯೂಸ್ ನಾಟೌಟ್: ಕಾರ್ಯಕರ್ತರ ವಿಚಾರದಲ್ಲಿ ಬೇಧ ಭಾವ ಮಾಡುವ ಬಿಜೆಪಿ ಮುಖಂಡರ ಕ್ರಮ ಸರಿಯಲ್ಲ. ಶಿವಮೊಗ್ಗದ ಹರ್ಷ ಮತ್ತು ಪ್ರವೀಣ್ ನೆಟ್ಟಾರ್ ಸಾವಿಗೆ ಸ್ಪಂದಿಸಿದ ಬಿಜೆಪಿ ಮತ್ತು ಸಂಘ ಪರಿವಾರ ತಮ್ಮದೇ ಸಂಘಟನೆಯ ಕಾರ್ಯಕರ್ತ ವಿನಾಯಕ ಬಾಳಿಗಾ ಸಾವಿಗೆ ಏಕೆ ನ್ಯಾಯ ಒದಗಿಸಲಿಲ್ಲ ಎಂದು ಪ್ರೊ.ನರೇಂದ್ರನಾಯಕ್ ಪ್ರಶ್ನಿಸಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯಾಗಿ ಏಳು ಕಳೆದ ಹಿನ್ನೆಲೆಯಲ್ಲಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ಮಂಗಳೂರಿನ ವೆಂಕಟರಮಣ ದೇವಸ್ಥಾನದಿಂದ ಬಾಳಿಗಾ ಮನೆಯವರೆಗೆ ಮಂಗಳವಾರ ಏರ್ಪಡಿಸಿದ್ದ ಜಾಥಾದ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ವಿನಾಯಕ ಬಾಳಿಗಾ ಕೊಲೆ ನಡೆದು ಏಳು ವರ್ಷ ಕಳೆದರೂ, ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿಲ್ಲ. ಅಲ್ಲದೇ ಕನಿಷ್ಠ ಅವರ ಮನೆಗೆ ಬಿಜೆಪಿಯ ಯಾವೊಬ್ಬ ಜನಪ್ರತಿನಿಧಿ ಭೇಟಿ ನೀಡಿ ಅವರ ಸಹೋದರಿಯರಿಗೆ ಧೈರ್ಯ ತುಂಬಿಲ್ಲ. ಸಂಘಪರಿವಾರದವರು ಹಾಗೂ ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೇರಿದ ಬಿಜೆಪಿಯವರು ಹಿಂದುಗಳಿಗೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ ಅವರು ಬಾಳಿಗಾ ಸಾವಿನ ಬಗ್ಗೆ ಯಾಕೆ ಧ್ವನಿ ಎತ್ತಿಲ್ಲ? ಬಾಳಿಗಾ ಅವರದೇ ಸಮುದಾಯದ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಕೂಡ ಸ್ಪಂದಿಸುತ್ತಿಲ್ಲ ಎಂದರು.
ಮನೋವೈದ್ಯ ಡಾ. ಪಿ.ವಿ ಭಂಡಾರಿ ಮಾತನಾಡಿ, ವಿನಾಯಕ ಬಾಳಿಗಾರ ಕೊಲೆ ನಡೆದು ಏಳು ವರ್ಷ ಸಂದರೂ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇಂತಹ ಸರ್ಕಾರ ಯಾಕೆ ಬೇಕು. ನ್ಯಾಯಕ್ಕಾಗಿ ಹೋರಾಡುವವರ ಮೇಲೆ ಸರ್ಕಾರ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದೆ. ಇದರ ವಿರುದ್ಧ ಹೋರಾಟ ಅಗತ್ಯವಿದೆ ಎಂದರು.
ನಾಗರಿಕ ಸೇವಾಟ್ರಸ್ಟ್ನ ಸೋಮನಾಥ ನಾಯಕ್, ಡಿಎಸ್ಎಸ್ ಮುಖಂಡ ಎಂ.ದೇವದಾಸ್ ಮಾತನಾಡಿದರು. ವಿನಾಯಕ ಬಾಳಿಗಾ ಅವರ ಸಹೋದರಿಯರಾದ ಹರ್ಷಾ ಬಾಳಿಗಾ, ಅನುರಾಧಾ ಬಾಳಿಗಾ, ಪ್ರಮುಖರಾದ ಮುಹಮ್ಮದ್ ಕುಂಜತ್ತಬೈಲ್, ಅಶ್ರಫ್, ಎಂ. ದೇವದಾಸ್, ವಾಸುದೇವ ಉಚ್ಚಿಲ್, ಸುನಿಲ್ ಬಜಿಲಕೇರಿ, ಸುನೀಲ್ ಕುಮಾರ್ ಬಜಾಲ್, ಬಿ.ಕೆ. ಇಮ್ತಿಯಾಜ್, ಮಂಜುಳಾ ನಾಯಕ್, ಪ್ರಕಾಶ್ ಸಾಲ್ಯಾನ್, ವಹಾಬ್ ಕುದ್ರೋಳಿ, ಸಂಜನಾ ಚಲವಾದಿ, ನಿತಿನ್ ಕುತ್ತಾರ್, ರಘು ಎಕ್ಕಾರ್, ರೇವಂತ್ ಕದ್ರಿ, ಕದ್ರಿ ಜೆರಾಲ್ಡ್ ಟವರ್ಸ್, ಡಿವೈಎಫ್ಐ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್ ಬಜಾಲ್ ಮತ್ತಿತರರು ಜಾಥಾದಲ್ಲಿದ್ದರು.