ನ್ಯೂಸ್ ನಾಟೌಟ್: ಹೆಚ್ ಡಿ ಕೋಟೆ ತಾಲೂಕಿನ ಡಿ ಬಿ ಕುಪ್ಪೆ ವನ್ಯಜೀವಿ ವ್ಯಾಪ್ತಿಯ ಮಾಸ್ತಿಗುಡಿ ಗಸ್ತಿನ ಕುಂಬಳಗೊಲ್ಲಿ ಅರಣ್ಯ ಪ್ರದೇಶದಲ್ಲಿ ಹುಲಿ ಮರಿಯ ಮೃತದೇಹವೊಂದು ಸೋಮವಾರ ಮಾರ್ಚ್ 20ರಂದು ಪತ್ತೆಯಾಗಿದೆ.
ಮತ್ತೊಂದು ಹುಲಿಯ ದಾಳಿಯಿಂದ ಹುಲಿ ಕೂಡ ಗಾಯಗೊಂಡಿದ್ದು, 12 ಮತ್ತು 13 ನೇ ಎದೆಗೂಡಿನ ಮೂಳೆಯ ನಡುವೆ ಮುರಿದು, ಬೆನ್ನುಹುರಿಗೆ ಹಾನಿ ಮತ್ತು ಎದೆಯಲ್ಲಿ ರಕ್ತ ಹೆಪ್ಪುಗಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯ ಎಚ್ ರಮೇಶ್, ಹುಲಿ ಮರಿ ಸಾವಿಗೂ ಮುನ್ನ ರಕ್ತಸ್ರಾವವಾಗಿತ್ತು ಎಂದು ತಿಳಿಸಿದ್ದಾರೆ.
ಹುಲಿಗಳ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಭಾರತದ ಹುಲಿಗಳ ಸಂತತಿ ಅಳಿವಿನಂಚಿನತ್ತ ಸಾಗುವ ಭಯ ಎದುರಾಗಿದೆ. ಅಂತರಸಂತೆ ವನ್ಯಜೀವಿ ವಲಯದ ತಾರಕ ಶಾಖೆಯ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಎರಡು ಹುಲಿಗಳ ಕಾಳಗದಲ್ಲಿ ಕಳೆದ ನವೆಂಬರ್ 28 ರಂದು ಗಂಡು ಹುಲಿ ಸಾವನ್ನಪ್ಪಿತ್ತು.
ಬಳಿಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯ ವಿಧಾನದಂತೆ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಇದೇ ವೇಳೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ಕೆ. ಎನ್ ರಂಗಸ್ವಾಮಿ, ಎನ್ಟಿಸಿಎ ನಾಮನಿರ್ದೇಶಿತ ಸದಸ್ಯ ದಿವ್ಯ ಚೌಧರಿ, ಮುಖ್ಯ ವನ್ಯಜೀವಿ ಪರಿಪಾಲಕರಿಂದ ನಾಮನಿರ್ದೇಶಿತ ಸದಸ್ಯ ಶ್ರೇಯಸ್ ದೇವನೂರು, ಡಿ. ಬಿ ಕುಪ್ಪೆ ವಲಯಾರಣ್ಯಧಿಕಾರಿ ಕೆ. ಎಲ್ ಮಧು ಡಿಆರ್ಎಫ್ಒ ಪ್ರಮೋದ್ ಸಿಬ್ಬಂದಿ ಉಮೇಶ್ ನಾಯಕ್ ಉಪಸ್ಥಿತರಿದ್ದರು ಎಂದು ವರದಿ ತಿಳಿಸಿದೆ.