ನ್ಯೂಸ್ ನಾಟೌಟ್: ಮದುವೆ ಎಂದರೆ ವಧು-ವರ ಜತೆಯಲ್ಲಿ ಕೂಡಿ ವೈವಾಹಿಕ ಜೀವನಕ್ಕೆ ಕಾಲಿಡುವ ಒಂದು ಕ್ಷಣ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಯಾಗಬೇಕಾದರೆ ಹುಡುಗನಿಗೆ ಗುಣಕ್ಕಿಂತಲೂ ಹೆಚ್ಚಾಗಿ ಉತ್ತಮ ಸಂಬಳ ಇರಬೇಕು ಎಂದು ಬಯಸುವ ಹುಡುಗಿಯರೇ ಹೆಚ್ಚು. ಆದರೆ ಇಲ್ಲೊಬ್ಬಳು ವಧು ಇದ್ಯಾವುದರ ಚಿಂತೆಯಲ್ಲದೇ ಸಪ್ತಪದಿ ತುಳಿದಿದ್ದಾಳೆ. ವರನಿಲ್ಲದೇ ಅದ್ದೂರಿಯಾಗಿ ಮದುವೆಯಾಗಿದ್ದಾಳೆ ಅರೆ! ಅದು ಹೇಗೆ?
ಉತ್ತರ ಪ್ರದೇಶದ ಔರೈಯಾದ ಬಿದುನಾದಲ್ಲಿ 31 ವರ್ಷದ ರಕ್ಷಾ ಸೋಲಂಕಿ ಎಂಬ ಮಹಿಳೆ ಶ್ರೀ ಕೃಷ್ಣನ ವಿಗ್ರಹದ ಜತೆ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾಳೆ. ಈ ಶುಭ ಮೂಹುರ್ತದಲ್ಲಿ ವಧುವಿನ ಕುಟುಂಬದವರು ಮತ್ತು ಅಕ್ಕಪಕ್ಕದ ಮನೆಯವರು ಸಾಕ್ಷಿಯಾದರು.ಈ ಮದುವೆ ಬಗ್ಗೆ ವಧುವಿನ ತಂದೆ ರಂಜಿತ್ ಸಿಂಗ್ ಮಾತನಾಡಿ, “ನನ್ನ ಮಗಳು 31 ವರ್ಷದ ರಕ್ಷಾ ಸೋಲಂಕಿ ಬಾಲ್ಯದಿಂದಲೂ ಕೃಷ್ಣನ ಭಕ್ತಿಯಲ್ಲಿ ಮುಳುಗಿದ್ದಳು. ನಂತರ ಶ್ರೀ ಕೃಷ್ಣನನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದಳು. ಮನೆಯವರು ಎಲ್ಲಾ ನಿರ್ಧರಿಸಿ ಪುರೋಹಿತರನ್ನು ಮನೆಗೆ ಕರೆಸಿ ಹಿಂದು ಸಂಪ್ರದಾಯದ ಪ್ರಕಾರ ಏಳು ಸುತ್ತು ಹಾಕಿದಳು. ಮಗಳ ನಿರ್ಧಾರದಿಂದ ಬಹಳ ಸಂತೋಷವಾಗಿದೆ. ಈಗ ಭಗವಾನ್ ಶ್ರೀ ಕೃಷ್ಣ ನನ್ನ ಅಳಿಯನಾಗಿದ್ದಾನೆ” ಎಂದು ಹೇಳಿದರು.
ರಕ್ಷಾನನ್ನು ನಾವು ಬೇರೆ ವರನ ಜೊತೆ ಮದುವೆ ಮಾಡಲು ನಿರ್ಧರಿಸಿದ್ದೆವು. ಆದರೆ ಕೆಲವು ದಿನಗಳ ಹಿಂದೆ ಶ್ರೀ ಕೃಷ್ಣ ತನ್ನ ಕೊರಳಿಗೆ ಹೂವಿನ ಹಾರ ಹಾಕಿದ ಹಾಗೆ ಕನಸು ಬಿತ್ತು ಎಂದು ತಿಳಿಸಿದಳು. ನಂತರ ಅವಳ ಇಚ್ಛೆಯಂತೆ ಶ್ರೀಕೃಷ್ಣನ ವಿಗ್ರಹದ ಜತೆ ಮದುವೆಯಾಗಿ ಸಂತೋಷವಾಗಿದ್ದಾಳೆ ಎಂದು ತಂದೆ ತಿಳಿಸಿದ್ದಾರೆ.