ನ್ಯೂಸ್ನಾಟೌಟ್: ಅಕ್ರಮವಾಗಿ ಮರಳು ಸಂಗ್ರಹಿಸಿ ಕೃತಕವಾಗಿ ಅಭಾವ ಸೃಷ್ಟಿಸಿ, ಮಳೆಗಾಲದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ದಾಸ್ತಾನು ಮಾಡಿದ್ದ 250 ಲೋಡ್ ಮರಳನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುರತ್ಕಲ್ ಠಾಣಾ ವ್ಯಾಪ್ತಿಯ ಮುಂಚೂರಿನಲ್ಲಿ ಸುಮಾರು 100 ಲೋಡ್ ಮತ್ತು ಚೇಳ್ಯಾರು ಗ್ರಾಮದಲ್ಲಿ 150 ಲೋಡ್ ಮರಳನ್ನು ಸುರತ್ಕಲ್ ಠಾಣೆ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ಮರಳಿನ ಬೆಲೆ 35 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ವಶಪಡಿಸಿದ ಮರಳನ್ನು ಎಂಎಂಆರ್ಡಿ ಕಾಯ್ದೆಯಡಿ ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಅಕ್ರಮ ಮರಳು ದಾಸ್ತಾನು ಮಾಡಿದ ಭೂಮಾಲೀಕರ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.