ನ್ಯೂಸ್ ನಾಟೌಟ್: ಸುಳ್ಯದ ಸಂಪಾಜೆ ಗ್ರಾಮದಲ್ಲಿ ಕಳೆದ ಬಾರಿ ಉಂಟಾದ ಜಲ ಪ್ರಳಯ ಸಂಕಷ್ಟದಿಂದಾಗಿ ಹೊಳೆಯಲ್ಲಿ ಹೂಳು ತುಂಬಿ ಈ ಬಾರಿ ಮತ್ತೆ ಮಳೆಗಾಲದಲ್ಲಿ ಪ್ರಳಯ ಭೀತಿಯ ಆತಂಕ ಉಂಟಾಗಿತ್ತು, ಈ ಬಗ್ಗೆ ನ್ಯೂಸ್ ನಾಟೌಟ್ ಸುಧೀರ್ಘ ವರದಿ ಮಾಡಿ ಜನ ಪ್ರತಿನಿಧಿಗಳ ಗಮನ ಸೆಳೆದಿತ್ತು.
ಈಗ ಸಂಪಾಜೆಯ ವಿವಿಧ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಮಾರ್ಚ್ ೧೮ ರಂದು ಅಧಿಕಾರಿಗಳ ತಂಡ ಸಂಪಾಜೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಅವರ ನೇತೃತ್ವದಲ್ಲಿ ಗ್ರಾಮಸ್ಥರ ನಿಯೋಗ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಅವರನ್ನು ಭೇಟಿ ಮಾಡಿ ಗ್ರಾಮದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಂಜೆಯ ವೇಳೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡವನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿ ತಾಂತ್ರಿಕ ವರದಿ ತಯಾರಿಸಿ ಕೂಡಲೇ ವರದಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ದಾಖಲೆಗಳಿಗಾಗಿ ನದಿಯಲ್ಲಿ ಹೂಳು ತುಂಬಿರುವದನ್ನು ಜಿಪಿಎಸ್ ಫೋಟೋ ತೆಗೆದುಕೊಂಡು, ಡ್ರೋನ್ ಮೂಲಕ ಚಿತ್ರೀಕರಣ ನಡೆಸಲಾಯಿತು. ಎಲ್ಲಾ ಪ್ರದೇಶಗಳ ಪರಿಶೀಲನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್, ಗಣಿ ಮತ್ತು ಭೂ ಗರ್ಭ ಇಲಾಖೆಯ ಉಪ ನಿರ್ದೇಶಕ ಲಿಂಗರಾಜು , ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿ ಶಂಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ತಹಸೀಲ್ದಾರ್ ಮಂಜುನಾಥ್ ಟಿ ಎಂ ಶಹೀದ್ ತೆಕ್ಕಿಲ್, ರವಿಶಂಕರ ಭಟ್ ಸುಳ್ಯಕೋಡಿ ಮತ್ತಿತರರು ಉಪಸ್ಥಿತರಿದ್ದರು.