ನ್ಯೂಸ್ ನಾಟೌಟ್: ತುಳು ಸಂಸ್ಕೃತಿ – ಆಚರಣೆಗಳು ಆರಾಧನೆಗೆ ಮಾತ್ರ ಸೀಮಿತವಾಗದೆ ಕಲೆಯಾಗಿ ಪ್ರದರ್ಶನಗೊಂಡು ತಮ್ಮದೇ ಆದ ವೈವಿಧ್ಯತೆಯನ್ನು ಸಾರುತ್ತಿವೆ. ತುಳು ರಂಗಭೂಮಿಯಲ್ಲಿ ದಾಖಲೆ ಬರೆದ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ “ಶಿವದೂತೆ ಗುಳಿಗೆ’ ತುಳು ನಾಟಕ ಈಗ ದೇಶ- ವಿದೇಶಗಳಲ್ಲೂ ಪ್ರದರ್ಶನಕ್ಕೆ ತಯಾರಾಗಿರುವುದು ವಿಶೇಷ.
ಕರಾವಳಿಯಾದ್ಯಂತ ಜನಮೆಚ್ಚುಗೆ ಪಡೆದಿದ್ದ “ಶಿವದೂತೆ ಗುಳಿಗೆ’ ನಾಟಕ ಬಳಿಕ ರಾಜ್ಯದ ವಿವಿಧ ಭಾಗಗಳು, ಇತ್ತೀಚೆಗೆ ಹೊರರಾಜ್ಯದಲ್ಲಿಯೂ ಯಶಸ್ವಿಯಾಗಿದ್ದು, ಈಗ ವಿದೇಶದಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ. 2020 ಜ. 2ರಂದು ಮೊದಲ ಪ್ರದರ್ಶನ ಕಂಡ ಈ ನಾಟಕದ 423 ಹಾಗೂ 424ನೇ ಪ್ರದರ್ಶನ ಮಾ. 19ರಂದು ಅಪರಾಹ್ನ 2.30 ಹಾಗೂ ಸಂಜೆ 6 ಗಂಟೆಗೆ ದುಬೈಯ ಅಲ್ ನಸರ್ ಲಿಸರೆಲ್ಯಾಂಡ್ ನಲ್ಲಿ ನಡೆಯಲಿದೆ. ಜತೆಗೆ ಕುವೈತ್, ಕತಾರ್, ಬಹ್ರೈನ್ನಲ್ಲಿಯೂ ಪ್ರಯೋಗಕ್ಕೆ ಸಿದ್ಧತೆ ನಡೆಯುತ್ತಿದೆ.
ನಾಟಕ ಮೇ 12ರಂದು ಮಸ್ಕತ್ನ ರೂಮಿಯ ಅಲ್ ಫಲಾಜ್ ಹೊಟೇಲ್ನ ಗ್ರ್ಯಾಂಡ್ ಹಾಲ್ನಲ್ಲಿ ಕನ್ನಡ ಹಾಗೂ ತುಳುವಿನಲ್ಲಿ 2 ಪ್ರದರ್ಶನ ಕಾಣಲಿದೆ. ಇದು 479 ಹಾಗೂ 480ನೇ ಪ್ರದರ್ಶನ. “ಕಾಂತಾರ’ ಸಿನೆಮಾದಲ್ಲಿ “ಗುರುವ’ ನಾಗಿ ಮಿಂಚಿರುವ ಸ್ವರಾಜ್ ಶೆಟ್ಟಿ ಶಿವದೂತೆ ಗುಳಿಗೆ ನಾಟಕದಲ್ಲಿ “ಗುಳಿಗ’ನಾಗಿ ಅಭಿನಯಿಸುತ್ತಿದ್ದಾರೆ.
“ಶಿವದೂತೆ ಗುಳಿಗೆ’ ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದ ಹಾಗೂ ಅತೀ ಹೆಚ್ಚು ಪ್ರದರ್ಶನ ಕಂಡ ತುಳುವಿನ ಮೊದಲ ನಾಟಕ. ಜತೆಗೆ ವಿದೇಶದಲ್ಲಿಯೂ ದಾಖಲೆಯ ಪ್ರದರ್ಶನ ಕಾಣುತ್ತಿದೆ.