ನ್ಯೂಸ್ ನಾಟೌಟ್ : ಸಮುದ್ರ ತೀರದಲ್ಲಿ ನೀರಿನಲ್ಲಿ ಬಾಲಕಿಯೋರ್ವಳು ಆಟವಾಡುತ್ತಿದ್ದಾಗ ಏಕಾಏಕಿ ಬಂದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿ ಹೋಗಿದ್ದ ಘಟನೆ ಉಡುಪಿಯ ಮಲ್ಪೆ ಬೀಚ್ ನಲ್ಲಿ ನಡೆದಿದೆ. ಕೂಡಲೇ ಎಚ್ಚೆತ್ತ ಲೈಫ್ಗಾರ್ಡ್ಗಳು ಹುಡುಗಿಯನ್ನು ರಕ್ಷಿಸಿದ್ದಾರೆ.
ಸಮುದ್ರ ತೀರದ ಬಳಿ ನೀರಿನಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಬೃಹದಾಕಾರದ ಅಲೆ ಅಪ್ಪಳಿಸಿದ್ದು, ಅಲೆಗಳ ಹೊಡೆತಕ್ಕೆ ಸಿಲುಕಿ ಬಾಲಕಿ ಮುಳುಗಿದ್ದಳು. ಕೂಡಲೇ ಬಾಲಕಿಯನ್ನು ರಕ್ಷಿಸಲು ಕಾರ್ಯಾಚರಣೆಗಿಳಿದ ಲೈಫ್ಗಾರ್ಡ್ ಮತ್ತು ಆಪತ್ಬಾಂಧವ ಈಶ್ವರ್ ಮಲ್ಪೆ ಅವರು ಯುವತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದುರ್ಗ ಮೂಲದ ಮಾನಗಿ ಗ್ರಾಮದ ಐಶ್ವರ್ಯಾ ( 16) ನೀರಿಗೆ ಬಿದ್ದ ಬಾಲಕಿ.
ಬಾಲಕಿಯನ್ನು ಸಮುದ್ರದಿಂದ ರಕ್ಷಿಸಿ ದಡಕ್ಕೆ ತಂದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಉಪ್ಪು ನೀರು ಕುಡಿದಿದ್ದರಿಂದ ಆಕೆ ಅಸ್ವಸ್ಥಳಾಗಿದ್ದಳು ಎಂದು ತಿಳಿದು ಬಂದಿದೆ.