ನ್ಯೂಸ್ ನಾಟೌಟ್: ಪಡಿತರ ಸಾಮಗ್ರಿಗಳು ಅದರಲ್ಲೂ ಪಡಿತರದ ಅಕ್ಕಿಯ ದುರ್ಬಳಕೆ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿದ್ದು, ಅಲ್ಲಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತದೆ. ಅಂತಹದ್ದೇ ಪ್ರಕರಣ ಬ್ರಹ್ಮಾವರದಲ್ಲಿ ದಾಖಲಾಗಿದೆ.
ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 5,00,790 ರೂ. ಮೌಲ್ಯದ 220 ಚೀಲ ಪಡಿತರ ಅಕ್ಕಿಯನ್ನು ಬ್ರಹ್ಮಾವರ ತಾಲೂಕು ಆಹಾರ ನಿರೀಕ್ಷಕರು ಪೊಲೀಸರ ಸಹಕಾರದೊಂದಿಗೆ ವಶಪಡಿಸಿಕೊಂಡಿದ್ದಾರೆ.
ಜೊತೆಗೆ ಸಾಗಾಟಕ್ಕೆ ಬಳಸಿದ ಕಂಟೈನರ್ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಬ್ರಹ್ಮಾವರ ಚಾಂತಾರು ಗ್ರಾಮದ ಕೃಷಿ ಕೇಂದ್ರದ ಬಳಿ ಬ್ರಹ್ಮಾವರ-ಹೆಬ್ರಿ ರಸ್ತೆಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬ್ರಹ್ಮಾವರ ಠಾಣಾ ಪಿಎಸ್ಐ ಹಾಗೂ ಸಿಬಂದಿಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ. ತಾಲೂಕು ಆಹಾರ ನಿರೀಕ್ಷಕರು 5,00,790 ರೂ. ಮೌಲ್ಯದ 220 ಚೀಲ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.