ನ್ಯೂಸ್ನಾಟೌಟ್: ಭಾರತ್ ಜೋಡೋ ಯಾತ್ರೆಯ ವೇಳೆ ಶ್ರೀನಗರದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾರತದಲ್ಲಿ ಈಗಲೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ಇದರ ಬಗ್ಗೆ ದೆಹಲಿ ಪೊಲೀಸರು ರಾಹುಲ್ ಗಾಂಧಿ ಹೇಳಿಕೆ ಪಡೆಯಲು ಪ್ರಯತ್ನಿಸಿದ್ದರು. ಇದೀಗ ಹೇಳಿಕೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಪ್ರಶ್ನೆಗೆ ರಾಹುಲ್ ಗಾಂಧಿ ಹತ್ತು ಅಂಶಗಳಲ್ಲಿ ನಾಲ್ಕು ಪುಟಗಳ ಉತ್ತರ ನೀಡಿದ್ದಾರೆ ಎಂದು ವರದಿಯಾಗಿದೆ.
ದೆಹಲಿ ಕಾನೂನು ಮತ್ತು ಸುವ್ಯವಸ್ಥೆ, ಸಿಪಿ ಡಾ.ಸಾಗರ್ ಪ್ರೀತ್ ಹೂಡಾ ಮತ್ತು ನವದೆಹಲಿ ಡಿಸಿಪಿ ಪ್ರಣವ್ ತಯಾಲ್ ನೇತೃತ್ವದ ದೆಹಲಿ ಪೊಲೀಸ್ ತಂಡ ಭಾನುವಾರ ಬೆಳಗ್ಗೆ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಲು ತುಘಲಕ್ ಲೇನ್ನಲ್ಲಿರುವ ಅವರ ಮನೆಗೆ ಭೇಟಿ ನೀಡಿತ್ತು.
ಮೂಲಗಳ ಪ್ರಕಾರ, ಮಾರ್ಚ್ 15 ರಂದು ಪೊಲೀಸ್ ತಂಡ ರಾಹುಲ್ ಗಾಂಧಿ ನಿವಾಸದಲ್ಲಿ ಮೂರು ಗಂಟೆಗಳ ಕಾಲ ಅವರಿಗೆ ನೋಟಿಸ್ ನೀಡಲು ಕಾದಿತ್ತು. ಆದರೆ ಅವರು ಭೇಟಿ ಮಾಡಲಿಲ್ಲ. ಮತ್ತೆ ಮಾರ್ಚ್ 16ರಂದು ಹಿರಿಯ ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿ ಒಂದೂವರೆ ಗಂಟೆ ಕಾದು ನೋಟಿಸ್ ನೀಡಿದ್ದಾರೆ. ಪೊಲೀಸರು ಸಾಮಾಜಿಕ ಮಾಧ್ಯಮದ ಪೋಸ್ಟ್ಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನಾವಳಿಗಳ ಪಟ್ಟಿ ಕಳುಹಿಸಿದ ನಂತರ ನೋಟಿಸ್ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.