ನ್ಯೂಸ್ ನಾಟೌಟ್: ಗೋಲ್ ಗಪ್ಪ ಅಂದ್ರೆ ಎಲ್ಲರ ಬಾಯಲ್ಲಿ ನೀರು ಬರುವುದು ಸಹಜ. ಇದೀಗ ಗೋಲ್ ಗಪ್ಪಕ್ಕೆ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರು ಕೂಡ ಮನಸೋತಿದ್ದಾರೆ. ಒಮ್ಮೆ ಗೋಲ್ ಗಪ್ಪಾ ಸವಿದ ಬಳಿಕ ಒನ್ ಮೋರ್ ಎಂದು ಮತ್ತೊಮ್ಮೆ ಕೇಳಿ ತಿಂದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಫ್ಯೂಮಿಯೊ ಕಿಶಿದಾ ಮಾರ್ಚ್ ೨೦ರಂದು ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿಯನ್ನು ಸ್ವಾಗತಿಸಿ ಬಳಿಕ ಅವರನ್ನು ದೆಹಲಿಯ ಬುದ್ಧ ಜಯಂತಿ ಪಾರ್ಕ್ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಜಪಾನ್ ಪ್ರಧಾನಿ ಬೋಧಿ ವೃಕ್ಷಕ್ಕೆ ಪುಷ್ಪಾರ್ಷನೆ ಮಾಡಿದ್ದಾರೆ.
ಇದೇ ವೇಳೆ ಗೋಲ್ ಗಪ್ಪ ಮತ್ತು ಲಸ್ಸಿಯನ್ನು ಜಪಾನ್ ಪ್ರಧಾನಿ ಫ್ಯೂಮಿಯೊ ಅವರಿಗೆ ಸವಿದದ್ದು ವಿಶೇಷವಾಗಿತ್ತು. ಗೋಲ್ ಗಪ್ಪ ರುಚಿಯನ್ನು ಸವಿದು ಭಾರತದ ವಿಶೇಷ ಖಾದ್ಯಕ್ಕೆ ಮನಸೋತ ಕಿಶಿದಾ “ಒನ್ ಮೋರ್” ಎಂದು ಮತ್ತೊಮ್ಮೆ ಕೇಳಿ ತಿಂದು ಸಂತೋಷಪಟ್ಟಿದ್ದಾರೆ.
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಗೋಲ್ ಗಪ್ಪ ಸವಿಯುವ ವಿಡಿಯೋ ಇದೀಗ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದೆ. ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರು ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗಿದೆ.