ನ್ಯೂಸ್ ನಾಟೌಟ್: ಇದೀಗ ಸುಳ್ಯ ತಾಲೂಕಿನಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ಗಳ ಸದ್ದು ಜೋರಾಗಿ ಕೇಳಿಬರುತ್ತಿದ್ದು, ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ನಿರಂತರವಾಗಿ ಮತದಾನ ಬಹಿಷ್ಕಾರದ ಬ್ಯಾನರ್ಗಳು ಕಾಣಸಿಗುತ್ತಿವೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ತಮ್ಮ ಬೇಡಿಕೆಗಳನ್ನು ಆಗ್ರಹಿಸಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದು, ಇದೀಗ ಅದೇ ಸಾಲಿಗೆ ಸುಳ್ಯದ ಗೋಂಟಡ್ಕ ಪರಿಸರವು ಸೇರ್ಪಡೆಯಾಗಿದೆ.
ಗೋಂಟಡ್ಕದಿಂದ ಮೂಡೆಕಲ್ಲು – ಬಾಜಿನಡ್ಕಗೆ ಹೊಗುವ ರಸ್ತೆ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಲು ಆಗ್ರಹಿಸಿ ಮಾರ್ಚ್ 14ರಂದು ಸಂಜೆ ಗೋಂಟಡ್ಕದಲ್ಲಿ ಆ ಭಾಗದ ನಿವಾಸಿಗಳು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.
ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ನಗರ ಪಂಚಾಯತ್ ಗೆ ಮನವಿ ಸಲ್ಲಿಸಿದರೂ ಏನು ಪ್ರಯೋಜನವಾಗಲ್ಲ. ಜನಪ್ರತಿನಿಧಿಗಳ ಟೊಳ್ಳು ಭರವಸೆಗೆ ಬೇಸತ್ತು ಮತದಾನ ಬಹಿಷ್ಕಾರಿಸುವುದಾಗಿ ಬ್ಯಾನರ್ನಲ್ಲಿ ಹಾಕಲಾಗಿದೆ.