ನ್ಯೂಸ್ ನಾಟೌಟ್: ಮಧ್ಯಾಹ್ನದ ಬಿಸಿಯೂಟದಲ್ಲಿ ಜೇನುತುಪ್ಪವನ್ನು ಸೇರಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಸಲಹೆ ನೀಡಿದೆ ಎಂದು ವರದಿ ತಿಳಿಸಿದೆ.
ಜೇನುತುಪ್ಪದಲ್ಲಿರುವ ಪೋಷಕಾಂಶಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಜೇನು ಸಾಕಣೆ ಮಾಡುವವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಸಲಹೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಎಲ್ಲ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದ್ದು, “ದೇಶದಲ್ಲಿ ಜೇನುತುಪ್ಪದ ಸೇವನೆಯನ್ನು ಹೆಚ್ಚಳ ಮಾಡುವ ಸಲುವಾಗಿ ಮತ್ತು ಜೇನುಸಾಕಣೆ ಉದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಜೇನನ್ನೂ ಸೇರಿಸಿ ಮಕ್ಕಳಿಗೆ ನೀಡಿ. ಜೇನುತುಪ್ಪದಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಮಕ್ಕಳ ಬೆಳವಣಿಗೆಗೂ ಇದು ಪೂರಕವಾಗಿರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಪ್ರಧಾನಮಂತ್ರಿ ಪೋಷಣ್ ಯೋಜನೆಯಡಿ ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಪ್ರತ್ಯೇಕವಾಗಿ ಜೇನುತುಪ್ಪ ನೀಡಲು ಅಥವಾ ಬೇರೆ ಬೇರೆ ಖಾದ್ಯಗಳಲ್ಲಿ ಅದನ್ನು ಸೇರಿಸಲು ಪ್ರಯತ್ನಿಸಿ’ ಎಂದು ಸಲಹೆ ನೀಡಲಾಗಿದೆ.