ನ್ಯೂಸ್ ನಾಟೌಟ್:ಕಳೆದ ವರ್ಷ ಸಂಭವಿಸಿದ ಮಹಾಮಳೆಗೆ ಜಲಪ್ರಯಳಯದಲ್ಲಿ ಮುಳುಗಿದ್ದ ಸಂಪಾಜೆ ಗ್ರಾಮ ಮತ್ತೊಮ್ಮೆ ಮುಳುಗುವ ಆತಂಕದಲ್ಲಿದ್ದು,ಪಯಸ್ವಿನಿಯ ಹೂಳು ಎತ್ತದಿದ್ದರೆ ಮತ್ತೊಮ್ಮೆ ದುರಂತ ಸಂಭವಿಸುವ ಅಪಾಯವಿದೆ.
ಹೀಗಾಗಿ ಈ ಕೂಡಲೇ ನದಿಯ ಹೂಳೆತ್ತಿ ಗ್ರಾಮ ಮುಳುಗಿ ಜನರ ಬದುಕು ಪ್ರವಾಹದ ಪಾಲಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಪಾಜೆ ಗ್ರಾಮದ ಜನರು ಗ್ರಾ.ಪಂ ಅಧ್ಯಕ್ಷ ಜಿ.ಕೆ. ಹಮೀದ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಸಂಪಾಜೆ ಕೃಷಿಕರಾದ ಕೊಂದಲಕಾಡು ನಾರಾಯಣ ಭಟ್, ರವಿಶಂಕರ್ ಭಟ್, ಸತ್ಯನಾರಾಯಣ ಭಟ್, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಂ. ಶಹೀದ್ ತೆಕ್ಕಿಲ್, ಯುವ ಮುಖಂಡ ರಹೀಮ್ ಬೀಜದಕಟ್ಟೆ ಉಪಸ್ಥಿತರಿದ್ದರು.
ಪ್ರವಾಹಕ್ಕೆ ಸಿಲುಕಿದ ಸಂಪಾಜೆಯ ದಶದಿಕ್ಕುಗಳಲ್ಲಿಯೂ ನ್ಯೂಸ್ ನಾಟೌಟ್ ಕಾರ್ಯಾಚರಣೆ ನಡೆಸಿತ್ತು.ಸಂತ್ರಸ್ತರನ್ನು ಭೇಟಿಯಾಗಿ ಅವರ ನೋವುಗಳನ್ನು ಸವಿಸ್ತಾರವಾಗಿ ತೆರೆದಿಟ್ಟಿತ್ತು.ಮಳೆಗಾಲ ಆರಂಭವಾಗಲು ಇನ್ನು ಎರಡು ತಿಂಗಳಷ್ಟೇ ಬಾಕಿಯಿದ್ದರೂ ಕ್ರಮತೆಗೆದುಕೊಳ್ಳದ ಅಧಿಕಾರಿಗಳು,ಜನಪ್ರತಿನಿಧಿಗಳ ನಡೆಯನ್ನು ಪ್ರಶ್ನಿಸಿತ್ತು.ಗಣಿ ಇಲಾಖೆ ಮಾಡುತ್ತಿರುವ ಅಸಡ್ಡೆಯಿಂದ ಹೂಳೆತ್ತುವ ಕಾರ್ಯ ವಿಳಂಬವಾಗುತ್ತಿದೆ ಎಂದು ಗ್ರಾ.ಪಂ ಅಧ್ಯಕ್ಷರು ಆರೋಪಿಸಿದ್ದರು.ಈ ಬೆನ್ನಲ್ಲೇ ತುರ್ತಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು ಎಂದು ಜಿಲ್ಲಾಧಿಕಾರಿ ರವಿ ಕುಮಾರ್ ಬಳಿ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಗಳು ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡುವರೇ? ಅಥವಾ ಜನರ ಬದುಕನ್ನು ಪ್ರವಾಹದಲ್ಲಿ ಮತ್ತೊಮ್ಮೆ ಕೊಚ್ಚಿ ಹೋಗಲು ಬಿಡುವರೇ ಅನ್ನುವುದನ್ನು ಕಾದುನೋಡಬೇಕಿದೆ.