ನ್ಯೂಸ್ ನಾಟೌಟ್: ವಿಧಾನಸಭಾ ಚುನಾವಣೆಗೆ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಎಚ್.ಎಂ ನಂದಕುಮಾರ್ ಅವರನ್ನು ಅಭ್ಯರ್ಥಿಯನ್ನಾಗಿಸಬೇಕು ಎನ್ನುವ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದ ಹೆಚ್ಚಿನ ಕಾರ್ಯಕರ್ತರ ಬೆಂಬಲವು ನಂದಕುಮಾರ್ ಅವರ ಪರ ಇರುವಂತೆ ಕ್ಷೇತ್ರದಲ್ಲಿ ಕಂಡು ಬರುತ್ತಿದ್ದು ಅನೇಕ ಆಕಾಂಕ್ಷಿಗಳ ನಡುವೆ ನಂದಕುಮಾರ್ ಅವರ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗಿದೆ.
ಎಚ್.ಎಂ ನಂದಕುಮಾರ್ ಅವರು ಕಳೆದ ಒಂದು ವರ್ಷಗಳಿಂದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಕಾರ್ಯಕ್ರಮಗಳಿಗೆ ತನ್ನ ಸೇವೆಯ ಮೂಲಕ ಸಹಾಯ ಮಾಡಿರುವುದು, ಕೋವಿಡ್ ಸಂದರ್ಭದಲ್ಲಿ ಫಲಾನುಭವಿಗಳನ್ನು ತಾವೇ ಸ್ವತಃ ಹುಡುಕಿ ಲಕ್ಷಾಂತರ ರೂಪಾಯಿಗಳ ಆಹಾರ ಸಾಮಾಗ್ರಿಗಳನ್ನು ನೀಡಿರುವುದು. ಕಾರ್ಯಕ್ರಮಗಳಿಗೆ ಸಹಾಯಧನ ನೀಡಿ ಸಹಕರಿಸುವುದು ಹೀಗೆ ಅನೇಕ ಸೇವೆಯ ಮೂಲಕ ಸುಳ್ಯದಲ್ಲಿ ಮನೆಮಾತಾಗಿದ್ದು, ಇವರು ಬಡವರಿಗೆ ಮಾಡುವ ಕಾಳಜಿ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನಸ್ಸಿನಿಂದ ಸುಳ್ಯದಲ್ಲಿ ಅನೇಕ ಅಭಿಮಾನಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಸುಳ್ಯ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎರಡು ಹೆಸರುಗಳು ಮುಂಚೂಣಿಯಲ್ಲಿದ್ದು , ಟಿಕೆಟ್ ಆಕಾಂಕ್ಷಿಯಾಗಿರುವ ಜಿ. ಕೃಷ್ಣಪ್ಪ ದೆಹಲಿಯಲ್ಲಿ ಇದ್ದಾರೆ ಎನ್ನಲಾಗಿದೆ. ಇತ್ತ ನಂದಕುಮಾರ್ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಮತ್ತು ಸಾರ್ವಜನಿಕ ವಲಯದಲ್ಲಿ ನಿರಂತರವಾಗಿ ಓಡಾಡಿಕೊಂಡಿದ್ದು, ಹಾಗೆಯೇ ಸಾರ್ವಜನಿಕ ವಲಯದಲ್ಲಿಯೂ ಕೂಡ ಹೆಚ್ಚಿನ ಜನರು ನಂದಕುಮಾರ್ ಅವರ ಪರ ಒಲವು ತೋರುತ್ತಿರುವುದು ಕಂಡು ಬರುತ್ತಿದೆ ಎನ್ನಲಾಗಿದೆ. ಸುಳ್ಯ ಕ್ಷೇತ್ರ ಚುನಾವಣಾ ಕಣ ಇನ್ನಷ್ಟು ರಂಗೇರುವಂತೆ ಮಾಡಿದೆ.