ನ್ಯೂಸ್ ನಾಟೌಟ್: ಶಂಕಿತ ಡೆಂಗ್ಯೂ ಜ್ವರಕ್ಕೆ ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮೂಡಬಿದಿರೆಯಿಂದ ವರದಿಯಾಗಿದೆ. ಮೃತ ವಿದ್ಯಾರ್ಥಿನಿ ಜ್ಯೋತಿನಗರ ನಿವಾಸಿ ಮಿಸ್ರಿಯಾ (17) ಆಳ್ವಾಸ್ ಪ.ಪೂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಳು.
ಕೆಲವು ದಿನಗಳಿಂದ ಆಕೆ ವಿಪರೀತ ಜ್ವರದಿಂದ ಬಳಲುತ್ತಿದ್ದು, ಬಿಳಿ ರಕ್ತ ಕಣಗಳ ಕುಸಿತ ಸಮಸ್ಯೆ ಉಲ್ಬಣಿಸಿ ರವಿವಾರ ರಾತ್ರಿ ನಿಧನ ಹೊಂದಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಮಾಹಿತಿ ನೀಡಿರುವ ತಾ| ಆರೋಗ್ಯಾಧಿಕಾರಿ ಡಾ| ಸುಜಯ್ ಭಂಡಾರಿ “ಸರಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಸಹಿತ ಮಲೇರಿಯಾ ಪ್ರಕರಣಗಳು ದಾಖಲಾಗಿದ್ದಲ್ಲಿ ಕೂಡಲೇ ಮಾಹಿತಿ ಲಭಿಸುತ್ತದೆ.ಖಾಸಗಿ ಆಸ್ಪತ್ರೆಗಳಿಂದ ಮಲೇರಿಯಾ ಕೇಂದ್ರಕ್ಕೆ ವರದಿ ಬಂದ ಬಳಿಕವಷ್ಟೇ ನಮಗೆ ಮಾಹಿತಿ ಸಿಗಲು ಸಾಧ್ಯ ಮತ್ತು ಆ ಕುರಿತು ಸೂಕ್ತ ಸಮೀಕ್ಷೆ, ಪರಿಶೀಲನೆ ನಡೆಸಲು ಸಾಧ್ಯವಾಗುತ್ತದೆ. ಮಿಸ್ರಿಯಾ ಪ್ರಕರಣ ಇನ್ನಷ್ಟೇ ಮಲೇರಿಯಾ ಕೇಂದ್ರಕ್ಕೆ ವರದಿಯಾಗಬೇಕಿದೆ. ಡೆಂಗ್ಯೂನಿಂದ ಈ ಸಾಲಿನಲ್ಲಿ ಇದುವರೆಗೆ ಮೂಡು ಬಿದಿರೆ ತಾಲೂಕಿನಲ್ಲಿ ಸಾವಿನ ಪ್ರಕರಣ ದಾಖಲಾಗಿಲ್ಲ. ಇದು ಡೆಂಗ್ಯೂ ನಿಂದಾದ ಸಾವು ಎಂದು ದೃಢಪಟ್ಟಲ್ಲಿ ಮೂಡುಬಿದಿರೆ ತಾಲೂಕಿನಲ್ಲಿ ಇದೇ ಈ ಸಾಲಿನ ಮೊದಲ ಪ್ರಕರಣ. ಈ ಬಗ್ಗೆ ತತ್ಕ್ಷಣ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರಗಿಸಲಾಗುವುದು” ಎಂದು ತಿಳಿಸಿದ್ದಾರೆ.