ನ್ಯೂಸ್ ನಾಟೌಟ್: ಮಹಿಳಾ ರೋಗಿಯೊಬ್ಬರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ವೈದ್ಯಕೀಯ ಸಹಾಯಕ ಶಸೀಂದ್ರನ್ ನನ್ನು ಕೇರಳ ಪೊಲೀಸರು ಸೋಮವಾರ ಮಾರ್ಚ್ ೨೦ ರಂದು ಬಂಧಿಸಿದ್ದಾರೆ.
ಕೇರಳದ ಕೋಝಿಕ್ಕೋಡ್ ನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಉದ್ಯೋಗಿ ಈ ಕೃತ್ಯ ಎಸಗಿದ್ದು, ಮಹಿಳಾ ಶಸ್ತ್ರಚಿಕಿತ್ಸಾ ಐಸಿಯುನಲ್ಲಿ ಸಂಪೂರ್ಣವಾಗಿ ಪ್ರಜ್ಞೆ ಬಂದ ನಂತರ ಮಹಿಳೆಯು ನರ್ಸ್ ಮತ್ತು ವೈದ್ಯರಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಸೇವೆಯಿಂದ ಅಮಾನತುಗೊಂಡ ಆರೋಪಿ ಶಸೀಂದ್ರನ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ ನಂತರ ಆತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದ್ದು, ಆತ ಈ ಹಿಂದೆಯೂ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯನ್ನು ಆಪರೇಷನ್ ಥಿಯೇಟರ್ನಿಂದ ಐಸಿಯುಗೆ ವರ್ಗಾಯಿಸಿದಾಗ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ವರದಿ ತಿಳಿಸಿದೆ. ಆಕೆಯನ್ನು ಐಸಿಯುಗೆ ವರ್ಗಾಯಿಸುವಾಗ ಮಹಿಳಾ ಉದ್ಯೋಗಿಗಳ ಲಭ್ಯತೆಯಿಲ್ಲದ ಕಾರಣ ಶಸೀಂದ್ರನ್ ನನ್ನು ನಿಯೋಜಿಸಲಾಯಿತು. ಇದನ್ನೇ ದುರುಪಯೋಗ ಪಡಿಸಿಕೊಂಡ ಆತ ರೋಗಿಯ ಮೇಲೆ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಕರಣದ ತನಿಖೆಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದು, ಇಂತಹ ಘಟನೆಗಳನ್ನು ತಡೆಯುವುದು ಹೇಗೆ ಎಂಬ ಬಗ್ಗೆ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ವರದಿ ನೀಡಲು ಸೂಚಿಸಿದ್ದಾರೆ. ಜೊತೆಗೆ ಸಹಾಯಕ ಆಯುಕ್ತ ಕೆ ಸುದರ್ಶನ್ ನೇತೃತ್ವದಲ್ಲಿ ಇನ್ನಷ್ಟು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.