ನ್ಯೂಸ್ ನಾಟೌಟ್: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೊನೆಗೂ ದಿನಾಂಕ ಘೋಷಣೆಯಾಗಿದ್ದು, ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮೇ 10ರಂದು ಚುನಾವಣೆ ನಡೆಯಲಿದೆ. ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏ. 20ರಂದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಏ. 21ರಂದು ನಾಮಪತ್ರ ಪರಿಶೀಲನೆ, 24ಕ್ಕೆ ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ. ರಾಜ್ಯದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ರಾಜ್ಯದಲ್ಲಿ 5 ಕೋಟಿ 21 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅದರಲ್ಲಿ 2 ಕೋಟಿ 59 ಲಕ್ಷ ಮಹಿಳಾ ಮತದಾರರು, 2 ಕೋಟಿ 66 ಲಕ್ಷ ಪುರುಷ ಮತದಾರರು 4699 ತೃತೀಯ ಲಿಂಗಿ ಮತದಾರರಿದ್ದಾರೆ.ಇದರಲ್ಲಿ 12.15 ಲಕ್ಷ ಯುವ ಮತದಾರರಾಗಿದ್ದಾರೆ.
ಈ ವರ್ಷ ಅಂಗವಿಕಲರಿಗೆ, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ 58282 ಜೇನು ಕುರುಬ, ಕಾಡುಕುರುಬ ಮತದಾರರಿಗೆ ಪ್ರತ್ಯೇಕ ಬೂತ್ ವ್ಯವಸ್ಥೆ ಮಾಡಲಾಗಿದೆ. ಮತದಾನ ಹೆಚ್ಚಳಕ್ಕೆ ಈ ಬಾರಿ ಉತ್ತೇಜನ ನೀಡಲಾಗಿದೆ.