ನ್ಯೂಸ್ ನಾಟೌಟ್: ಮಳೆಗಾಲ ಸಮೀಪಿಸುತ್ತಿದ್ದಂತೆ ಪ್ರಾಕೃತಿಕ ವಿಕೋಪಗಳು ಎದುರಾಗುವ ಭಯ ಆವರಿಸಿದೆ. ಅದರಲ್ಲೂ ಕೊಡಗು ಜಿಲ್ಲೆಯ ಜನರು ಹೆಚ್ಚು ನಿದ್ದೆಗೆಡಿಸಿಕೊಂಡಿದ್ದಾರೆ. ಗುಡ್ಡ ಕುಸಿಯುವುದು, ಬರೆ ಜರಿಯುವುದು, ಪ್ರವಾಹದ ನೀರು ಮನೆಗಳಿಗೆ ನುಗ್ಗುವುದು ಇದೆಲ್ಲದರಿಂದ ಆತಂಕಕ್ಕೀಡಾಗಿದ್ದಾರೆ. ಈ ಸಲವೂ ಅಂತಹುದೇ ವಾತಾವರಣ ನಿರ್ಮಾಣವಾಗಿದೆ.
ಮಡಿಕೇರಿ ತಾಲೂಕು ಪ್ರಾಕೃತಿಕ ವಿಕೋಪಗಳಿಂದ ನಲುಗಿ ಹೋಗಿದೆ. ಮಳೆಗಾಲ ಶುರುವಾಗುತ್ತಿದ್ದಂತೆ ಜನರು ಜೀವ ಭಯದಿಂದ ಜೀವನ ನಡೆಸುವಂತಹ ಪರಿಸ್ಥಿತಿ ಬಂದಿದೆ. ಹಲವು ಕಡೆ ಶಾಲಾ-ಕಾಲೇಜುಗಳಿಗೂ ವ್ಯಾಪಕ ಹಾನಿಯಾಗಿದೆ. ಬಿರುಕು ಬಿಟ್ಟಿರುವ ಕಟ್ಟಡಗಳ ಅಡಿಯಲ್ಲೇ ವಿದ್ಯಾರ್ಥಿಗಳು ಅನಿವಾರ್ಯವಾಗಿ ಪಾಠ ಕೇಳುವ ಸ್ಥಿತಿ ಇದೆ. ಸದ್ಯ ಮಡಿಕೇರಿ ತಾಲೂಕಿನ ಕೊಯನಾಡಿನ ಸರಕಾರಿ ಶಾಲೆಯಲ್ಲಿ ಇಂತಹ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ.
ಕಳೆದ ವರ್ಷ ಮಡಿಕೇರಿ ತಾಲೂಕಿನ ಕೊಯನಾಡು ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡಗಳು ಪ್ರಾಕೃತಿಕ ವಿಕೋಪದಿಂದ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸದ್ಯ ಕುಸಿಯಲು ಸಿದ್ಧವಾಗಿ ನಿಂತಿದೆ. ಇಂತಹ ದುಸ್ಥಿತಿಯಲ್ಲಿ ವಿದ್ಯಾರ್ಥಿಗಳು ಹೆದರಿಕೊಂಡು ಪಾಠವನ್ನು ಕೇಳುವಂತಾಗಿದೆ. 2022ರಲ್ಲಿ ಭೂ ಕುಸಿತ ಸಂಭವಿಸಿ ಶಾಲಾ ಕಟ್ಟಡಕ್ಕೆ ಭಾರೀ ಹಾನಿಯಾಗಿದೆ. ಆ ಸಂದರ್ಭ ಶಾಲೆಯನ್ನ ಮೂರು ತಿಂಗಳು ಕಾಲ ಬೇರೆ ಸ್ಥಳದಲ್ಲಿ ನಡೆಸಲಾಗಿತ್ತು. ಮಳೆ ಕಡಿಮೆಯಾದ ಬಳಿಕ ಇದೀಗ ಮರಳಿ ಅಲ್ಲಿಯೇ ತರಗತಿ ಮಾಡಲಾಗುತ್ತಿದೆ. ಶಾಲೆಯ ಹಿಂಬದಿ ಭೂ ಕುಸಿತದಲ್ಲಿ ಬಂದ ಮಣ್ಣಿನ ರಾಶಿಯನ್ನ ಈಗಾಗಲೇ ತೆರವು ಮಾಡಲಾಗುತ್ತಿದೆ. ಆದರೂ ಶಾಲೆಯ ಹಿಂಬದಿ ಬೆಟ್ಟ ಮಳೆಗಾಲದಲ್ಲಿ ಮತ್ತೆ ಉರುಳಿ ಬಿದ್ದರೆ ಏನು ಗತಿ ಎಂದು ಪೋಷಕರು ಚಿಂತೆಗೀಡಾಗಿದ್ದಾರೆ. ಹಾಗಾಗಿ ಮಕ್ಕಳು ಪ್ರಾಣ ಭಯದಲ್ಲೇ ಪಾಠ ಕೇಳುವಂತಾಗಿದೆ.
ಶಾಲಾಭಿವೃದ್ಧಿ ಸಮಿತಿ ಈಗಾಗಲೇ ಬಹಳಷ್ಟು ಬಾರಿ ಚಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಹಾಗೂ ಶಿಕ್ಷಣ ಇಲಾಖೆಗೆ ಶಾಲೆಯನ್ನು ಸುಧಾರಿಸುವಂತೆ ಮನವಿ ಮಾಡಿದೆ. ಇದ್ದಕ್ಕೆ ಸ್ಪಂದಿಸಿರುವ ಶಿಕ್ಷಣ ಇಲಾಖೆ ಹೆಚ್ಚುವರಿಯಾಗಿ ಒಂದು ಕಟ್ಟಡ ಕಟ್ಟಿದೆ. ಮತ್ತೊಂದು ಕಟ್ಟಡದ ನಿರ್ಮಾಣಕ್ಕೂ ಈಗಾಗಲೇ ಅನುಮತಿ ನೀಡಿದೆ. ಆದರೆ ಬಿರುಕು ಬಿಟ್ಟಿರುವ ಕಟ್ಟಡವನ್ನು ದುರಸ್ಥಿ ಮಾಡಿ, ಶಾಲೆಯ ಹಿಂಬದಿ ತಡೆಗೋಡೆ ಯಾಕೆ ಕಟ್ಟಿಲ್ಲ ಎಂಬುದು ಜನರ ಪ್ರಶ್ನೆಯಾಗಿದೆ. ಯಾಕೆಂದರೆ ತಡೆಗೋಡೆ ಕಟ್ಟಿಲ್ಲವೆಂದರೆ ಮುಂದಿನ ಮಳೆಗಾಲದಲ್ಲಿಯೂ ಹಿಂದಿನ ಗುಡ್ಡಗಳು ಜರಿಯುವ ಪರಿಸ್ಥಿತಿ ಇದೆ. ಆದ್ದರಿಂದ ಅನಾಹುತ ಕಟ್ಟಿಟ್ಟ ಬುತ್ತಿಯೆಂಬುದು ಜನರ ಆತಂಕವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಶಾಸಕ ಕೆ.ಜಿ ಬೋಪಯ್ಯ, ಸದ್ಯದ ವಾತಾವರಣದಲ್ಲಿ ಶಾಲೆ ಸುರಕ್ಷಿತವಾಗಿಲ್ಲ. ಹಾಗಾಗಿ ಅಲ್ಲಿ ಶಾಲೆ ಮುಂದುವರಿಸುವುದು ಸೂಕ್ತ ಅಲ್ಲ. ಶಾಲೆಯನ್ನ ದುರಸ್ಥಿ ಬದಲು ಹೊಸ ಕಟ್ಟಡ ಕಟ್ಟಲಾಗುವುದು ಎಂದು ಹೇಳಿದ್ದಾರೆ.