ನ್ಯೂಸ್ ನಾಟೌಟ್: ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣಗೊಳ್ಳುತ್ತಿರುವ ಮಂದಿರದ ಗರ್ಭಗುಡಿಯಲ್ಲಿ ಸ್ಥಾಪನೆಯಾಗಲಿರುವ ಶ್ರೀರಾಮನ ಮೂರ್ತಿ ಕೆತ್ತನೆಗೆ ಆಯ್ಕೆ ಮಾಡಲಾದ ಮೂರು ಶಿಲೆಗಳ ಪೈಕಿ ಉಡುಪಿ ಜಿಲ್ಲೆಯ ಕಾರ್ಕಳದ ಕೃಷ್ಣ ಶಿಲೆಯನ್ನೂ ಆಯ್ಕೆ ಮಾಡಲಾಗಿದೆ.
ಗುರುವಾರ ರಾತ್ರಿ ಕಾರ್ಕಳ ಬಳಿಯ ಈದು ಪ್ರದೇಶದಿಂದ ಬೃಹತ್ ಗಾತ್ರದ ಕಲ್ಲಿಗೆ ವಿಶೇಷ ಪೂಜೆ ನಡೆಸಿ ದೊಡ್ಡ ಲಾರಿಯಲ್ಲಿ ಅಯೋಧ್ಯೆಗೆ ಕಳುಹಿಸಿಕೊಡಲಾಗಿದೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಯೋಗ್ಯ ಕಲ್ಲನ್ನು ಹುಡುಕುವ ಕಾರ್ಯ ಹಲವು ತಿಂಗಳಿಂದ ನಡೆಯುತ್ತಿತ್ತು.
ಈದು ಗ್ರಾಮದ ತುಂಗಾ ಪೂಜಾರಿಯವರ ಮನೆಯಿಂದ ನೆಲ್ಲಿಕಾರು ಮಾದರಿಯ ಶಿಲಾಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಕಾರ್ಕಳದ ನೆಲ್ಲಿಕಾರಿನ ಶಿಲೆಯ ಹಿರಿಮೆಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ.
ಕೆಲ ತಿಂಗಳ ಹಿಂದೆ ಕ್ಯಾತ ಸಿಲಾ ತಜ್ಞ ಖಷ್ದೀಪ್ ಬನ್ಸಾಲ್ ಮೊದಲಾದ ತಜ್ಞರ ತಂಡ, ಸ್ಥಳೀಯರ ಬಜರಂಗದಳದ ಕಾರ್ಯಕರ್ತರು ನೆಲ್ಲಿಕಾರು ಶಿಲೆ ಪರೀಕ್ಷಿಸಿ ಮೂರ್ತಿ ನಿರ್ಮಾಣಕ್ಕೆ ಅತ್ಯುತ್ತಮವಾದುದು ಎಂದು ಮನವರಿಕೆಯಾದ ನಂತರ ಅಯೋಧ್ಯೆಗೆ ಕೊಂಡೊಯ್ಯಲು ಒಪ್ಪಿಗೆ ಸೂಚಿಸಿದರು. ಈಗಾಗಲೇ ಮೂರ್ತಿಯ ಕೆತ್ತನೆಗೆ ನೇಪಾಳ ಸೇರಿದಂತೆ ವಿವಿಧೆಡೆಯಿಂದ ವಿಶಿಷ್ಟ ಶಿಲೆಗಳನ್ನು ಅಯೋಧ್ಯೆಗೆ ತರಿಸಲಾಗಿದೆ.
ಶಿಲೆಯು ಹತ್ತು ಟನ್ ತೂಕ, ಅಡಿ ಉದ್ದ, ಆರು ಅಡಿ ಅಗಲ, ಮತ್ತು ನಾಲ್ಕು ಅಡಿ ದಪ್ಪವಿದೆ. ಕ್ರೇನ್ಗಳ ಸಹಾಯದ ಮೂಲಕ ಶಿಲೆಕಲ್ಲನ್ನು ಮೇಲಕ್ಕೆ ಎತ್ತಿ ಬಜಗೋಳಿ ಅಯ್ಯಪ್ಪ ಮಂದಿರಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿ ಅಯೋಧ್ಯೆಗೆ ಕಳುಹಿಸಲಾಗಿದೆ. ಗಣ್ಯರ ಸಮ್ಮುಖದಲ್ಲಿ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.