ನ್ಯೂಸ್ ನಾಟೌಟ್: ಹಿಂದು ವಿರೋಧಿ ಕೃತ್ಯಗಳು ಮಾಯವಾಗಿ ಸಮಾಜದಲ್ಲಿ ಐಕ್ಯತೆ ಮೂಡಬೇಕು ಎಂಬ ಕಾರಣಕ್ಕಾಗಿ ವಿಶ್ವ ಹಿಂದು ಪರಿಷತ್ ವತಿಯಿಂದ ವಿವಿಧ ಹಿಂದು ಕಾರ್ಯಕರ್ತರು ಜತೆಗೂಡಿ ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ ಮಾಡಲಾಗಿದೆ. ಧಾರ್ಮಿಕ ಕ್ಷೇತ್ರಗಳಿಗೆ ಅಪಚಾರವಾದಾಗ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಇದೇ ಕೊರಗಜ್ಜನ ಆದಿಸ್ಥಳಕ್ಕೆ ಪಾದಯಾತ್ರೆ ನಡೆಸಿತ್ತು. ಈ ವರ್ಷವೂ ಕೂಡ ಭಕ್ತರು ಕೊರಗಜ್ಜನ ಸನ್ನಿಧಿಗೆ ಪಾದಯಾತ್ರೆ ನಡೆಸಿ ಸಂಕಲ್ಪಗಳನ್ನು ಮಾಡಿದ್ದಾರೆ.
ಸುಮಾರು 12 ಕಿ.ಮೀ. ದೂರದವರೆಗೆ ಪಾದಯಾತ್ರೆ ನಡೆದಿದೆ. ಬರಿಗಾಲಿನಲ್ಲಿ ಪಾದಯಾತ್ರೆಯಲ್ಲಿ ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.
ಕೆಲ ವರ್ಷಗಳಿಂದ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ದೈವಸ್ಥಾನಗಳಿಗೆ ಅಪಚಾರ ಎಸಗುವ ಕೃತ್ಯಗಳು ನಿರಂತರವಾಗಿ ನಡೆಯುತ್ತಿದೆ. ಕಾಣಿಕೆ ಹುಂಡಿಯನ್ನು ಅಪವಿತ್ರಗೊಳಿಸುವುದು, ವಿಗ್ರಹಗಳಿಗೆ ಹಾನಿ ಮಾಡುವ ಕೃತ್ಯ ಎಸಗುವ ಪ್ರಕರಣಗಳು ಬೆಲಕಿಗೆ ಬರುತ್ತಿದ್ದು, ಈ ದುಷ್ಕೃತ್ಯ ಎಸಗುವವರು ಶೀಘ್ರವೇ ಸೆರೆಯಾಗುವಂತೆ ವಿಶ್ವ ಹಿಂದೂ ಪರಿಷತ್ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಮೊರೆ ಹೋಗಿದೆ.
ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಯಿಂದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ ನಡೆಸಿತ್ತು. ಹೀಗೆ ಕಳೆದ ಮೂರು ವರ್ಷಗಳಿಂದ ಈ ಪಾದಯಾತ್ರೆ ನಡೆಯುತ್ತಿದ್ದು, ಈ ವರ್ಷವೂ ನಿನ್ನೆ ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ಪಾದಯಾತ್ರೆ ನಡೆಯಿತು. ಸದ್ಯ ನಡೆಯುತ್ತಿರುವ ಹಿಂದೂ ವಿರೋಧಿ ಕೃತ್ಯಗಳು ಮಾಯವಾಗುವಂತೆ ಪ್ರಾರ್ಥಿಸಲಾಯಿತು ಎಂದು ವರದಿ ತಿಳಿಸಿದೆ.
“ಪಾದಯಾತ್ರೆಯ ಬಳಿಕ ಧಾರ್ಮಿಕ ಕ್ಷೇತ್ರಗಳ ಅಪವಿತ್ರಗೊಳಿಸುವ ದುಷ್ಕೃತ್ಯ ನಡೆಸಿದ ಕಿಡಿಗೇಡಿಗಳು ಪೊಲೀಸರ ವಶಕ್ಕೆ ಸಿಕ್ಕಿದ್ದರು. ಆ ಬಳಿಕ ಮೂರು ವರ್ಷದಿಂದ ಈ ಪಾದಯಾತ್ರೆ ಮುಂದುವರಿಯುತ್ತಿದೆ. ಈ ಬಾರಿಯು ಸಹ ಹಿಂದೂ ವಿರೋಧಿ ಕೃತ್ಯ ಮಾಯವಾಗುವಂತೆ ನಾವು ಕೊರಗಜ್ಜನಲ್ಲಿ ಪ್ರಾರ್ಥಿಸಿದ್ದೇವೆ” ಎಂದು ವಿಶ್ವಹಿಂದೂಪರಿಷತ್ ಕಾರ್ಯಕರ್ತರು ಹೇಳಿದ್ದಾರೆ.