ನ್ಯೂಸ್ ನಾಟೌಟ್ : ಕಾವೇರಿ ನದಿಯ ತೀರ್ಥವನ್ನು ‘ಇ–ಪ್ರಸಾದ’ ಯೋಜನೆಯಡಿ ಅಂಚೆ ಮೂಲಕ ವಿತರಿಸುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ತಲಕಾವೇರಿ ಮೂಲಸ್ವರೂಪ ರಕ್ಷಣಾ ವೇದಿಕೆ ವಿರೋಧ ವ್ಯಕ್ತಪಡಿಸಿದ್ದು, ಕಾವೇರಿ ತೀರ್ಥವನ್ನು ಹಣಕ್ಕೆ ಮಾರಾಟ ಮಾಡುವುದು ಸರಿಯಲ್ಲ ಎಂಬ ಮಾತು ಕೇಳಿ ಬಂದಿದೆ.
ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ತಲಕಾವೇರಿ ಕ್ಷೇತ್ರ ವಿಭಿನ್ನವಾದ ಕ್ಷೇತ್ರ. ತೀರ್ಥರೂಪಿಣಿಯಾದ ಕಾವೇರಿಯನ್ನು ಹಣಕ್ಕೆ ಮಾರಾಟ ಮಾಡುವುದು ಸರಿಯಲ್ಲ. ಕೂಡಲೇ ಅಂಚೆ ಕಚೇರಿಯಿಂದ ಮಾರಾಟ ಮಾಡುವ ಈ ವ್ಯವಸ್ಥೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ’ ಎಂದು ವೇದಿಕೆಯ ಸಂಚಾಲಕ ಉಳ್ಳಿಯಡ ಎಂ.ಪೂವಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಲಕಾವೇರಿ ಕ್ಷೇತ್ರ ಪವಿತ್ರವಾದ ಪೂಜನೀಯ ಸ್ಥಳ.ಭಕ್ತರು ಅಲ್ಲಿಗೆ ಬಂದು ತೀರ್ಥವನ್ನು ಸ್ವೀಕರಿಸಬೇಕು. ಸುಂದರವಾದ ಪ್ರಕೃತಿ ಮಧ್ಯೆ ಕಂಗೊಳಿಸುವ ಕಾವೇರಿ ತಲಕಾವೇರಿ ಅದರದ್ದೇ ಆದ ಇತಿಹಾಸವನ್ನು ಸಾರಿ ಹೇಳುತ್ತಿದೆ.ಇಂತಹ ಪ್ರಕೃತಿಯ ನಡುವೆ ಇರುವ ತಲಕಾವೇರಿಗೆ ತೆರಳಿ ಪೂಜ್ಯಭಾವನೆಯಿಂದ ತೀರ್ಥ ಸ್ವೀಕರಿಸುವುದು ಕ್ರಮ. ಈ ತೀರ್ಥವನ್ನು ಮಾರಾಟ ಮಾಡುವುದು ಎಷ್ಟು ಸರಿ? ಅದಕ್ಕೆ ಅನುಮತಿ ನೀಡಿದವರು ಯಾರು ಎಂದು ಅವರು ಪ್ರಶ್ನಿಸಿದರು.ವೇದಿಕೆಯ ಕಾನೂನು ಸಲಹೆಗಾರ ರತನ್ ತಮ್ಮಯ್ಯ, ಸದಸ್ಯೆ ಉಳ್ಳಿಯಡ ಡಾಟಿ ಪೂವಯ್ಯ, ಪುಡಿಯಂಡ ಕೆ ಮುತ್ತಣ್ಣ ಇದ್ದರು.