ನ್ಯೂಸ್ ನಾಟೌಟ್ : ಕೊಡಗು ಅಂದಾಕ್ಷಣ ಥಟ್ಟನೆ ನೆನಾಪಾಗೋದು ಮಡಿಕೇರಿ ಸೊಬಗು.ಅಲ್ಲಿನ ಪ್ರಕೃತಿ ಸೌಂದರ್ಯವನ್ನು ವರ್ಣಿಸಲಸಾಧ್ಯ. ಅದರಲ್ಲು ಮಡಿಕೇರಿಯ ರಾಜಾಸೀಟ್ ಗೆ ಹೋಗದವರಿಲ್ಲ.ಇದೀಗ ಅದರ ಕೂಗಳತೆ ದೂರದಲ್ಲೇ ಸಾಹಸೋದ್ಯಾನವೊಂದು ಉದ್ಘಾಟನೆಗೊಂಡಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಈ ಸಾಹಸ ಕ್ರೀಡಾತಾಣವನ್ನು ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚು ರಂಜನ್ ವೀಕ್ಷಿಸಿ,ಇದೊಂದು ಉತ್ತಮ ಕಾರ್ಯಕ್ರಮ’ ಎಂದರು.ನಂತರ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ‘ರಾಜಸೀಟ್ ಉದ್ಯಾನವು ಆಕರ್ಷಣೀಯ ಸ್ಥಳವಾಗಿದೆ. ತೋಟಗಾರಿಕೆ ಮತ್ತು ಜಿಲ್ಲಾಡಳಿತದಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಸಾಹಸ ಕ್ರೀಡೆಗೆ ಚಾಲನೆ ನೀಡಲಾಗಿದೆ. ಇದೊಂದು ವಿನೂತನ ಕಾರ್ಯಕ್ರಮ’ ಎಂದರು.
ಮಾರ್ಚ್ 18ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗ್ರೇಟರ್ ರಾಜಸೀಟ್ ಉದ್ಯಾನವನ್ನು ಉದ್ಘಾಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಸಾಹಸ ಕ್ರೀಡೆಗೆ ಸಂಬಂಧಿಸಿದಂತೆ ಕೊಡಗಿನ ಅನೇಕ ಭಾಗಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು.
ಬಳಿಕ ನಗರದ ರಾಜಸೀಟು ಉದ್ಯಾನವನದಲ್ಲಿ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರ್ಮಾಣವಾದ ಸಾಹಸ ಕ್ರೀಡಾ ವಿಭಾಗವನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಉದ್ಘಾಟಿಸಿದರು.ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ನಾಯಕ, ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್, ಕೊಡಗು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಉಪಸ್ಥಿತರಿದ್ದರು.