ನ್ಯೂಸ್ ನಾಟೌಟ್ : ಕೊಡವ ಜನರಲ್ಲಿ ಹಾಕಿ ಪಂದ್ಯಾವಳಿ ಕೇವಲ ಕ್ರೀಡೆಯಾಗಿ ಉಳಿಯದೇ ಅದೊಂದು ಹಬ್ಬವಾಗಿ ಸಂಭ್ರಮಿಸುವುದು ಇಲ್ಲಿನ ವಿಶೇಷ. ಇದೀಗ ನಾಲ್ಕು ವರ್ಷದ ಬಳಿಕ ಆದ್ದೂರಿ ಚಾಲನೆಗೊಂಡಿರುವ ಹಾಕಿ ಪಂದ್ಯಾವಳಿ ಕಳೆದ ಸಾಲು ಸಾಲು ಪ್ರಕೃತಿ ವಿಕೋಪಗಳು ಮತ್ತು ಕೊರೊನಾ ದುರಂತಗಳನ್ನು ಮರೆಸುವ ಆಶಯಹೊಂದಿದೆ ಎನ್ನಲಾಗಿದೆ.
ಈ ಬಾರಿ 23ನೇ ವರ್ಷದ ಪಂದ್ಯಾವಳಿ ಮಾ.18 ರಿಂದ ಆರಂಭಗೊಂಡು ನಾಪೋಕ್ಲುನಲ್ಲಿ ಸುಮಾರು 23 ದಿನಗಳ ಕಾಲ ನಡೆಯುತ್ತಿದ್ದು ಅಪ್ಪಚೆಟ್ಟೋಳಂಡ ಕುಟುಂಬ ಇದರ ಉಸ್ಥುವಾರಿ ವಹಿಸಿಕೊಂಡಿದೆ ಎಂದು ವರದಿ ತಿಳಿಸಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದಕ್ಕೆ ಅದ್ಧೂರಿ ಚಾಲನೆ ನೀಡಿದ್ದಾರೆ.
ಈ ಹಿಂದೆ 2018ರಲ್ಲಿ 22ನೇ ವರ್ಷದ ಹಾಕಿ ಪಂದ್ಯಾವಳಿ ನಡೆದಿದ್ದು ಅದಾದ ಬಳಿಕ ಈ ಬಾರಿ 336 ತಂಡಗಳು ಆಟವಾಡಲಿದ್ದು, ಹಾಕಿ ಪಂದ್ಯಾವಳಿ ನಡೆಯುವ ಅಷ್ಟು ದಿನಗಳಲ್ಲಿ ಆಟದೊಂದಿಗೆ ಕೊಡವ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ ಹಾಡು, ಜನಪದ ನೃತ್ಯಗಳು ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ.
ಕೊಡಗನ್ನು ಕರ್ನಾಟಕದ ಪಂಜಾಬ್ ಎಂಬ ಅನ್ವರ್ಥನಾಮದಿಂದ ಕೂಡ ಕರೆಯಲಾಗುತ್ತದೆ. ಇದಕ್ಕೆ ಇಲ್ಲಿನವರಿಗೆ ಹಾಕಿ ಮೇಲೆ ಇರುವ ಅಭಿಮಾನ ಕಾರಣ ಎನ್ನುತ್ತಾರೆ. ಇಲ್ಲಿನ ಕೊಡವ ಕುಟುಂಬಗಳ ನಡುವಿನ ಪಂದ್ಯಾವಳಿ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದು, ಈ ಪಂದ್ಯಾವಳಿಯನ್ನು ಹುಟ್ಟು ಹಾಕಿದ ಕೀರ್ತಿ ಕೊಡವ ಹಾಕಿ ಆಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿದ್ದ ದಿವಂಗತ ಪಾಂಡಡ ಕುಟ್ಟಪ್ಪ ಅವರಿಗೆ ಸಲ್ಲುತ್ತದೆ.
ಕುಟ್ಟಪ್ಪನವರು ಬಾಲ್ಯದಿಂದಲೇ ಹಾಕಿ ಆಟದ ಬಗ್ಗೆ ಎಲ್ಲಿಲ್ಲಾದ ವ್ಯಾಮೋಹವಿತ್ತು. ಹಾಕಿ ಸ್ಟಿಕ್ಗೆ ಅವರು ಹುಡುಗರನ್ನು ಕರೆದುಕೊಂಡು ಮರಕ್ಕೆ ಹತ್ತಿ ತಾವೇ ಕತ್ತಿಯನ್ನು ಬಳಸಿಕೊಂಡು ಸ್ಟೀಕ್ ರೆಡಿಮಾಡುತ್ತಿದ್ದರು. ರಬ್ಬರ್ ಚೆಂಡನ್ನು ತೆಗೆದುಕೊಂಡು ಕುಗ್ರಾಮ ಕರಡಾದ ಮೈದಾನದಲ್ಲಿ ಆಟವಾಡುತ್ತಿದ್ದರು. ಆದರೆ ಇದೇ ಬಾಲಕ ಕೊಡಗಿನಲ್ಲಿ ಕೊಡವ ಕುಟುಂಬಗಳ ನಡುವಿನ ‘ಹಾಕಿನೆಮ್ಮೆ’ ಎಂಬ ಹೆಸರಿನ ಹಾಕಿ ಪಂದ್ಯಾವಳಿಯ ಜನಕ ಎಂದೇ ಹೆಸರು ಪಡೆದಿದ್ದಾರೆ.
ಈ ಬಗ್ಗೆ ಅವರು ಕೊಡವ ಕುಟುಂಬಗಳ ಆಟಗಾರರಿಗಾಗಿ ಹಾಕಿ ಉತ್ಸವ ನಡೆಸುವ ಬಗ್ಗೆ ಕುಟುಂಬಗಳ ಹಿರಿಯರ ಜೊತೆ ಮತ್ತು ಆಟಗಾರರೊಂದಿಗೆ ಚರ್ಚೆ ನಡೆಸಿದರು. ಪ್ರತಿ ವರ್ಷ ಒಂದೊಂದು ಕುಟುಂಬ ಉತ್ಸವದ ಜವಾಬ್ದಾರಿ ವಹಿಸುವಂತೆಯೂ, ಆ ಕುಟುಂಬದ ಹೆಸರಿನಲ್ಲಿ ವಿಜೇತ ತಂಡಕ್ಕೆ ಕಪ್ ನೀಡಲು ತೀರ್ಮಾನಿಸಿದರು.
ನಂತರ 1997ರಲ್ಲಿಪಾಂಡಡ ಕುಟುಂಬವೇ ಸಾರಥ್ಯ ವಹಿಸಿ ವೀರಾಜಪೇಟೆಯ ಪುಟ್ಟ ಗ್ರಾಮ ಪಾಂಡಡ ಕುಟ್ಟಪ್ಪರವರ ಹುಟ್ಟೂರಾದ ಕರಡದ ಮೈದಾನದಲ್ಲಿ ಈ ಪಂದ್ಯಾವಳಿ ಆರಂಭಿಸಲಾಯಿತು. ಆರಂಭದಲ್ಲಿ ಸುಮಾರೂ 60 ಕೊಡವ ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಆರಂಭದಲ್ಲಿ ಇದೊಂದು ಕೇವಲ ಪಂದ್ಯಾವಳಿಯಾಗಿದ್ದದ್ದು ನಂತರದ ವರ್ಷಗಳಲ್ಲಿ ಅದೊಂದು ಉತ್ಸವವಾಗಿ ಮಾರ್ಪಾಡಾಯಿತು ಎನ್ನಲಾಗುತ್ತದೆ.