ನ್ಯೂಸ್ ನಾಟೌಟ್: ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿದ್ದ ನಾಳಿನ ಕರ್ನಾಟಕ ಬಂದ್ ರದ್ದುಗೊಂಡಿದೆ. ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಖಂಡಿಸಿ ಮಾರ್ಚ್ 9ರ ಬೆಳಗ್ಗೆ 9ರಿಂದ 11 ಗಂಟೆಯವರೆಗೆ ಬಂದ್ ನಡೆಸುವ ಬಗ್ಗೆ ಕಾಂಗ್ರೆಸ್ನಿಂದ ಕರೆ ನೀಡಲಾಗಿತ್ತು.
ಸ್ವಯಂಪ್ರೇರಿತ ಬಂದ್ಗೆ ಕರೆ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ತಿಳಿಸಿದ ಕೆಲವು ಗಂಟೆಗಳ ವಳಗೆ ಆ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ವರದಿಯಾಗಿದೆ. ಪಿಯುಸಿ ಪರೀಕ್ಷೆ (PUC Exam) ಇರುವ ಕಾರಣ ಮಾರ್ಚ್ 9 ರಂದು ಬೆಳಗ್ಗೆ 9 ಗಂಟೆಗೆ ಕರೆದಿದ್ದ ಕರ್ನಾಟಕ ಬಂದ್ (Karnataka Bandh) ವಾಪಸ್ ಪಡೆಯುತ್ತಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. “ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರವಾಣಿ ಮೂಲಕ ಕರೆ ಮಾಡಿದ್ದರು.
ಸ್ಕ್ರೀನಿಂಗ್ ಕಮಿಟಿ ಆಗುವ ವೇಳೆ ಎಲ್ಲಾ ನಾಯಕರು ಸೇರಿ ಈ ನಿರ್ಧಾರ ಹೇಳಿದ್ದಾರೆ. ಹೀಗಾಗಿ ನಾಳೆ ಬಂದ್ ಇರುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಶಾಲಾ ಸಂಸ್ಥೆಗಳು ಬಂದ್ ಬೇಡ ಎಂದು ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ನಾಯಕರು ಬಂದ್ ಮುಂದೂಡಿದ್ದಾರೆ. ಸ್ಕ್ರೀನಿಂಗ್ ಕಮಿಟಿ ಸಭೆ ಇದೆ, ಮುಗಿದ ಬಳಿಕ ಯಾವ ರೀತಿ ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ.
ಮಕ್ಕಳಿಗೆ ತೊಂದರೆ ಕೊಡಬಾರದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿಕೆಶಿ ಸೂಚನೆ ಮೇರೆಗೆ ಬಂದ್ ಹಿಂಪಡೆದಿದ್ದೇವೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು. ಬಂದ್ ವಾಪಸ್? ಇನ್ನು ಈ ಬಂದ್ ಏಕಾಏಕಿ ಹಿಂಪಡೆದಿರುವುದಕ್ಕೆ ಪಕ್ಷದ ಹಿರಿಯ ನಾಯಕರ ಅಸಮಾಧಾನವೇ ಕಾರಣ ಎನ್ನಲಾಗುತ್ತಿದೆ. ಹೌದು ಈ ಹಿಂದೆ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸುವ ಹಿನ್ನೆಲೆ ಪರೀಕ್ಷೆಯನ್ನು ಮುಂದೂಡಲಾಗಿತ್ತು.
ಈ ವಿಚಾರವಾಗಿ ಅಂದು ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ವ್ಯಾಪಕವಾಗಿ ಟೀಕೆ ಮಾಡಿತ್ತು. ಹೀಗಿರುವಾಗ ನಾಳೆ ಪಿಯುಸಿ ವಿಧ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿರುವಾಗಲೇ ಬಂದ್ ಮಾಡಿದ್ರೆ ತಮಗೇ ಮುಜುಗರ ಉಂಟಾಗುತ್ತದೆ. ‘ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಮಾ. 9ರ ಬೆಳಗ್ಗೆ 9 ಗಂಟೆಯಿಂದ 11 ರವರೆಗೆ ಎರಡು ಗಂಟೆಗಳ ಕಾಲ ಸಾಂಕೇತಿಕ ಬಂದ್ ಮಾಡಲು ಕಾಂಗ್ರೆಸ್ ನಿರ್ಧರಿಸಿತ್ತು.
ಆದರೆ ಪರೀಕ್ಷೆಗಳು ಇರುವ ಕಾರಣ ಬಂದ್ನಿಂದ ನಮಗೆ ತೊಂದರೆಯಾಗಲಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರ ಹಿತ ನಮ್ಮ ಆದ್ಯತೆ. ಹೀಗಾಗಿ ಅವರ ಅಭಿಪ್ರಾಯಕ್ಕೆ ಗೌರವ ನೀಡಿ ಬಂದ್ ಕರೆ ವಾಪಸ್ ಪಡೆಯಲು ತೀರ್ಮಾನಿಸಿದ್ದೇವೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.