ನ್ಯೂಸ್ ನಾಟೌಟ್ : ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ಕೆಲವು ದಿನಗಳ ಹಿಂದಷ್ಟೇ ಪಿಎಫ್ಐ ಮುಖಂಡ, ಕೊಡಗಿನ ಮೂಲದ ತುಫೈಲ್ ಬಂಧಿತನಾಗಿದ್ದ. ಇದೀಗ ಈತ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಸದ್ದು ಮಾಡಿದ್ದ ಬಜರಂಗ ದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯ ಹತ್ಯೆಯಲ್ಲೂ ಭಾಗಿಯಾಗಿದ್ದನೇ ಎಂಬ ಅನುಮಾನವಿರುವ ಪ್ರಶ್ನೆಗಳು ಕೇಳಿಬಂದಿವೆ.
ಏಳು ವರ್ಷಗಳ ಹಿಂದೆ ನಡೆದ ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿ ಹತ್ಯೆಯಲ್ಲೂ ಸಂಚುಕೋರನಾಗಿದ್ದ! ಎಂಬ ಮಾತುಗಳು ಕೇಳಿ ಬಂದಿವೆ.ಪ್ರವೀಣ್ ನೆಟ್ಟಾರು ಕೊಲೆಯಲ್ಲಿ ಈತನ ಮೇಲೆ ಕ್ರಿಮಿನಲ್ ಸಂಚು ನಡೆಸಿದ ಮತ್ತು ಪ್ರಕರಣದ ಮೂವರು ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪವಿದೆ. ಮೈಸೂರಿನ ಕೊಪ್ಪ ಗ್ರಾಮದಲ್ಲಿ ಮೂರು ಜನ ಆರೋಪಿಗಳಿಗೆ ತುಫೈಲ್ ರಕ್ಷಣೆ ಒದಗಿಸಿದ್ದ. ಈ ಮೂವರೂ ಆರೋಪಿಗಳು ಪ್ರವೀಣ್ ನೆಟ್ಟಾರು ಕೊಲೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಇನ್ನು ತುಫೈಲ್ನ ಪತ್ತೆಗಾಗಿ ಕಳೆದ ೨ ತಿಂಗಳ ಹಿಂದೆ ಎನ್ಐಎ ಐದು ಲಕ್ಷ ರೂ. ಬಹುಮಾನ ಘೋಷಿಸಿತ್ತು.ಕಡೆಗೂ ಈತನನ್ನು ಸೆರೆ ಹಿಡಿಯಲಾಗಿದ್ದು ಆತನ ವಿಚಾರಣೆ ವೇಳೆ ಇನ್ನೂ ಹಲವು ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.ಕೊಡಗಿನಲ್ಲಿ ಆತನ ಮೇಲೆ ಎರಡು ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದವು.ಈ ನಡುವೆ ಬೆಚ್ಚಿಬೀಳಿಸುತ್ತಿರುವ ಸಂಗತಿಯೆಂದರೆ ಪ್ರಶಾಂತ್ ಕೊಲೆ ಪ್ರಕರಣದಲ್ಲಿ ಆತ ಭಾಗಿಯಾಗಿದ್ದಾನೆ ಎನ್ನುವುದು.ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ ಘಟನೆ ಅದಾಗಿತ್ತು.ಮೂಡುಬಿದಿರೆಯಲ್ಲಿ ಹೂವಿನ ವ್ಯಾಪಾರಿಯಾಗಿದ್ದು, ಬಜರಂಗ ದಳ ಕಾರ್ಯಕರ್ತನಾಗಿಯೂ ಕೆಲಸ ಮಾಡುತ್ತಿದ್ದ ಪ್ರಶಾಂತ ಪೂಜಾರಿಯನ್ನು 2015ರ ಅಕ್ಟೋಬರ್ 9ರಂದು ಮುಂಜಾನೆ ದುಷ್ಕರ್ಮಿಗಳು ಕೊಚ್ಚಿ ಕೊಂದು ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಗೋ ಸಾಗಾಟಗಾರರೂ ಸೇರಿದಂತೆ ಒಂಬತ್ತು ಮಂದಿಯನ್ನು ಆರೋಪಿಗಳೆಂದು ಅಂದು ಗುರುತಿಸಿ ಹಲವರನ್ನು ಬಂಧಿಸಲಾಗಿತ್ತು.ಇದೀಗ ಇದರ ಮಧ್ಯೆ ಮತ್ತೊಂದು ಅನುಮಾನಗಳ ಪ್ರಶ್ನೆಗಳು ಹುಟ್ಟಿಕೊಂಡಿದ್ದು,ಆರೋಪಿ ತುಫೈಲ್ನು ಪ್ರಶಾಂತ್ ಪೂಜಾರಿಯ ಕೊಲೆಯಲ್ಲೂ ಸಂಚುಕೋರನಾಗಿ ಭಾಗಿಯಾಗಿದ್ದಾನೆ ಎನ್ನುವ ಗುಮಾನಿಯೊಂದು ಮುನ್ನಲೆಗೆ ಬಂದಿದೆ. ಈ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಎನ್ಐಎ ಪೊಲೀಸರು ಇನ್ನಷ್ಟೇ ಬಹಿರಂಗಪಡಿಸಬೇಕಾಗಿದೆ.