ನ್ಯೂಸ್ ನಾಟೌಟ್ :ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳು ಮದುವೆಯಾಗಿ ಮೂರೇ ದಿನಕ್ಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಕುಶಾಲನಗರ ತಾಲೂಕಿನಲ್ಲಿ ಸಂಭವಿಸಿದೆ.ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವಂತಹ ಘಟನೆ ಇದಾಗಿದ್ದು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.ಅಕ್ಷಿತಾ (18) ಸಾವನ್ನಪ್ಪಿದ ಯುವತಿ.
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸಮೀಪದ 7ನೇ ಹೊಸಕೋಟೆ ಎಂಬಲ್ಲಿ ಈ ಘಟನೆ ನಡೆದಿದೆ. ದಲಿತ ಯುವತಿಯೊಬ್ಬಳು ಒಕ್ಕಲಿಗ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು.ಅದೇ ಗ್ರಾಮದ ಹೇಮಂತ್ ಎಂಬ ಒಕ್ಕಲಿಗ ಯುವಕನನ್ನು ಈಕೆ ಪ್ರೀತಿಸಿದ್ದಳು. ಮೂರು ದಿನಗಳ ಹಿಂದೆ ಇಬ್ಬರೂ ದೇವಾಲಯದಲ್ಲಿ ಮದುವೆಯಾಗಿ ಬಂದಿದ್ದರು.ಆದರೆ ತನ್ನ ಮಗ ದಲಿತ ಯುವತಿಯನ್ನು ಮದುವೆಯಾಗಿದ್ದು ಮನೆಯರಿಗೆ ಒಂಚೂರು ಇಷ್ಟವಿರಲಿಲ್ಲ ಎನ್ನಲಾಗಿದೆ. ಹೇಮಂತ್ನ ಪೋಷಕರಾದ ದಶರಥ ಮತ್ತು ಗಿರಿಜಾ ಇದರಿಂದ ರೊಚ್ಚಿಗೆದ್ದಿದ್ದರು. ಒಂದು ವೇಳೆ ಆಕೆಯನ್ನು ಮದುವೆಯಾಗಿದ್ದೇ ಆದರೆ ಆಕೆಯನ್ನು ಸಾಯಿಸಿಬಿಡುವುದಾಗಿ ಹೇಳಿದ್ದರು ಎಂದು ಅಕ್ಷಿತಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೃತದೇಹ ರವಾನಿಸಲಾಗಿದ್ದು, ಪರೀಕ್ಷೆ ನಡೆಸಲಾಗುತ್ತಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.