ನ್ಯೂಸ್ ನಾಟೌಟ್ : ರಾಜ್ಯದಿಂದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯು ನಾಲ್ಕು ತಂಡಗಳ ನೇತೃತ್ವದಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳನ್ನು ಪ್ರವೇಶಿಸಿ ರೋಡ್ ಶೋ, ಸಭೆಗಳನ್ನು ನಡೆಸುತ್ತಿದೆ. ಆರ್.ಅಶೋಕ್ ಹಾಗೂ ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡವು ಮುನ್ನಡೆಸುತ್ತಿರುವ ವಿಜಯ ಸಂಕಲ್ಪ ಯಾತ್ರೆಯು ಮಾ.11-13ರವರೆಗೆ ದ.ಕ.ಜಿಲ್ಲೆಯಲ್ಲಿದ್ದು ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ, ಸಾರ್ವಜನಿಕ ಸಭೆಯನ್ನು ನಡೆಸುತ್ತಿದೆ.
ವಿಜಯ ಸಂಕಲ್ಪ ಯಾತ್ರೆಯ ಪ್ರಯುಕ್ತ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಹಿತ ರಾಜ್ಯದ ಪ್ರಮುಖರು ಬೆಳ್ತಂಗಡಿಗೆ ಆಗಮಿಸಿದರು.ವಿಜಯ ಸಂಕಲ್ಪ ಯಾತ್ರೆಯ ಹಿನ್ನೆಲೆ ಮಂಗಳೂರಿನಿಂದ ಆಗಮಿಸಿ ಬೆಳ್ತಂಗಡಿ ತಾಲೂಕಿನಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರ್ಯಾಲಿ ನಡೆಸುವ ಹಿನ್ನೆಲೆ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿದರು.ಧರ್ಮಸ್ಥಳ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಅವರು ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು.ಅಲ್ಲಿಂದ ಬೆಳ್ತಂಗಡಿ ಮಾರ್ಗವಾಗಿ ಆಗಮಿಸಿ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನ ಸಮೀಪದಿಂದ ತಾಲೂಕಿನ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ವಾಣಿ ಕಾಲೇಜು ಮೈದಾನದಿಂದ ಲಾಯಿಲ ವೆಂಕಟ್ರಮಣ ದೇವಸ್ಥಾನದವರೆಗೆ ರೋಡ್ ಶೋ ನಡೆಸಿದರು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂಂತ್ರಿ ಕೆ.ಎಸ್.ಈಶ್ವರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ , ಶಾಸಕ ಹರೀಶ್ ಪೂಂಜ ಸಹಿತ ಹಲವು ಗಣ್ಯರು ಭಾಗಿಯಾದರು.ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ರೋಡ್ ಶೋದಲ್ಲಿ ಪಾಲ್ಗೊಂಡಿದ್ದರು.ಒಂದು ಕ್ಷಣ ಬೆಳ್ತಂಗಡಿ ನಗರ ಕೇಸರಿಮಯವಾಗಿತ್ತು.
ದ.ಕ ಜಿಲ್ಲೆಯಾದ್ಯಂತ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆ ಮಾ.11ರಂದು ದ.ಕ.ಜಿಲ್ಲೆಯ ಸುಳ್ಯವನ್ನು ಪ್ರವೇಶಿಸಿತು.ಮಧ್ಯಾಹ್ನ 3ಗಂಟೆಗೆ ಅದ್ದೂರಿ ರೋಡ್ ಶೋ ಮೂಲಕ ಸಾವಿರಾರು ಬಿಜೆಪಿ ಕಾರ್ಯಕರ್ತರು,ಗಣ್ಯರು ಪಾಲ್ಗೊಂಡಿದ್ದರು.ಇಂದು ಬೆಳಗ್ಗೆ 10.30ಕ್ಕೆ ಬೆಳ್ತಂಗಡಿ ಪ್ರವೇಶಿಸಿದ ವಿಜಯ ಸಂಕಲ್ಪ ಯಾತ್ರೆ ರೋಡ್ ಶೋ ನಡೆಸಿತು.ಇನ್ನು ಮಧ್ಯಾಹ್ನ 3ಗಂಟೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರವನ್ನು ಪ್ರವೇಶಿಸಲಿದೆ.