ನ್ಯೂಸ್ ನಾಟೌಟ್ : ಇಡೀ ವಿಶ್ವದ ಜನತೆಯನ್ನೇ ತಲ್ಲಣಗೊಳಿಸಿದ್ದ ಕೊರೊನಾ ಹಾವಳಿ ಕಡಿಮೆಯಾಗಿದೆ ಎಂದು ಚೇತರಿಸಿಕೊಳ್ಳುವಷ್ಟರಲ್ಲಿ ಎಚ್3ಎನ್2 ವೈರಸ್ ಹಾವಳಿ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಆರೋಗ್ಯ ಸಿಬ್ಬಂದಿಗೆ ಇಂದಿನಿಂದಲೇ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.ಕರ್ನಾಟಕದಲ್ಲಿ ಈವರೆಗೆ 26 ಮಂದಿಯಲ್ಲಿ ಎಚ್3ಎನ್2 ವೈರಸ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಜ್ವರ, ಕೆಮ್ಮು, ಶೀತ ಜ್ವರದ ಹಾವಳಿ ಹೆಚ್ಚಾಗಿದೆ. ಇದಕ್ಕೆ ಎಚ್3ಎನ್2 ವೈರಸ್ ಕಾರಣವಾಗಿದ್ದು, ಕಳೆದ ಎರಡು ತಿಂಗಳಿನಿಂದ ಈ ಕುರಿತು ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಎಲ್ಲೆಡೆ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ.ಈ ಸಂಬಂಧ ಸೋಮವಾರ ವಿಧಾನಸೌಧದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ತಜ್ಞರು, ತಾಂತ್ರಿಕಾ ಸಲಹಾ ಸಭೆ ನಡೆಸಿದರು.ಈ ವೇಳೆ ಮಾತನಾಡಿದ ಸಚಿವರು ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈ ಮೂಲಕ ರೋಗಿಗಳಿಗೆ ಅರಿವು ಮೂಡಿಸಬೇಕು. ಕಳೆದ ಜನವರಿಯಿಂದ ಮಾಚ್ ವರೆಗೆ ಈ ಹೊಸ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ ಎಂದಿದ್ದಾರೆ.
ಗರ್ಭಿಣಿಯರು,ಮಕ್ಕಳು ಸಹ ಅಗತ್ಯ ಮುಂಜಾಗೃತೆ ಕ್ರಮ ವಹಿಸಬೇಕು. ಮಕ್ಕಳು, 60 ವರ್ಷ ಮೇಲ್ಪಟ್ಟವರಿಗೆ ಈ ವೈರಸ್ ಬೇಗ ತಗುಲುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಜ್ವರ ಕೆಮ್ಮು, ಶೀತ ಅನಾರೋಗ್ಯ ಸಮಸ್ಯೆಗಳು ಕಂಡು ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು. ನಿರ್ಲಕ್ಷ ಮಾಡದೇ ಚಿಕಿತ್ಸೆ ಪಡೆಯಬೇಕು. ಸದ್ಯಕ್ಕೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಆರೋಗ್ಯ ಇಲಾಖೆಯ ಪ್ರಕಾರ ಇದು ಮಾರಣಾಂತಿಕ ಕಾಯಿಲೆ ಅಲ್ಲ . ಗಾಳಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ಜ್ವರವಾಗಿದೆ. ವಾತಾವರಣದಲ್ಲಿ ಉಂಟಾಗುವ ಉಷ್ಣ , ಗಾಳಿ, ಚಳಿ ಬದಲಾವಣೆಗಳಿಂದ ರೂಪುಗೊಂಡು ಹೊಸ ತಳಿ ಸೃಷ್ಟಿಯಾಗುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ ವಿಶ್ರಾಂತಿ ಪಡೆಯುವುದು ಮುಖ್ಯ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
* ಬಿಸಿ ಆಹಾರಪದಾರ್ಥಗಳನ್ನು ಸೇವಿಸುವುದು
* ಸೀನುವಾಗ ಅಥವಾ ಕೆಮ್ಮುವಾಗ ದೂರವಿರುವುದು ಮತ್ತು ಕರವಸ್ತ್ರ ಬಳಸುವುದು
* ನೀರನ್ನು ಬಿಸಿ ಮಾಡಿ ಆರಿಸಿ ಕುಡಿಯುವುದು
* ಕಡ್ಡಾಯವಾಗಿ ಮಾಸ್ಕ್ ಧರಿಸುವುದು
* ವೈದ್ಯರಿಂದ ಮುಂಜಾಗೃತ ಸಲಹೆಯನ್ನು ಪಡೆಯುವುದು