ನ್ಯೂಸ್ ನಾಟೌಟ್: ಪ್ರಭು ಶ್ರೀರಾಮನಿಗಾಗಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರದಲ್ಲಿ ಭವ್ಯ ಶ್ರೀರಾಮನ ಮೂರ್ತಿ ಕೆತ್ತನೆಗೆ ಕಾರ್ಕಳದಿಂದ ಕೊಂಡೊಯ್ದ ಕೃಷ್ಣ ಶಿಲೆ ಮೂರು ದಿನಗಳ ನಿರಂತರ ಸಂಚಾರದ ಬಳಿಕ ಸೋಮವಾರ ಮಧ್ಯಾಹ್ನ ಅಯೋಧ್ಯೆಗೆ ತಲುಪಿದೆ.
ಕಾರ್ಕಳದಿಂದ ಸುಮಾರು 2280 ಕಿ.ಮೀ. ದೂರಕ್ಕೆ ಸಂಚರಿಸಿದ ಕೃಷ್ಣ ಶಿಲೆಯನ್ನು ಅಯೋಧ್ಯೆಯಲ್ಲಿ ಮಾಜಿ ಸಚಿವ, ಉದ್ಯಮಿ ನಾಗರಾಜ ಶೆಟ್ಟಿ ನೇತೃತ್ವದಲ್ಲಿ ಸ್ವಾಗತಿಸಲಾಯಿತು.ಉದ್ಯಮಿ ನಾಗರಾಜ ಶೆಟ್ಟಿ ಮಾಲಿಕತ್ವದ ಗಣೇಶ್ ಶಿಪ್ಪಿಂಗ್ ಏಜನ್ಸಿಯ ಬೃಹತ್ ಲಾರಿಯಲ್ಲಿ 6ರಿಂದ 8 ಟನ್ ತೂಕದ ಬೃಹತ್ ಶಿಲೆ ಕಲ್ಲನ್ನು ಕಾರ್ಕಳದಿಂದ ಒಯ್ಯಲಾಗಿತ್ತು. ಇದಕ್ಕಾಗಿ ನಾಗರಾಜ ಶೆಟ್ಟಿ ತಮ್ಮ ಕಂಪನಿಯ ಇಬ್ಬರು ಚಾಲಕರು ಮತ್ತು ಹೊಸ ಲಾರಿಯನ್ನು ಉಚಿತವಾಗಿ ನೀಡಿದ್ದರು.
ಈ ಹಿಂದೆ, ನೇಪಾಳ, ರಾಜಸ್ಥಾನದಿಂದ ರಾಮನ ಮೂರ್ತಿ ಕೆತ್ತಲು ವಿವಿಧ ರೀತಿಯ ಶಿಲೆ ಕಲ್ಲುಗಳನ್ನು ಅಯೋಧ್ಯೆಗೆ ತರಲಾಗಿತ್ತು. ಆದರೆ ಗುಣಮಟ್ಟದ ಶಿಲೆಗಾಗಿ ಹುಡುಕಾಟ ನಡೆದಿತ್ತು. ಕಾರ್ಕಳದ ಕಪ್ಪು ಶಿಲೆ ಅತ್ಯಂತ ಬಾಳಿಕೆಯುಳ್ಳದ್ದು ಮತ್ತು ಕರಾವಳಿಯಲ್ಲಿ ನಾಗನ ಕಲ್ಲುಗಳನ್ನು ಅದನ್ನೇ ಬಳಸುತ್ತಿದ್ದು, ಈ ನಿಟ್ಟಿನಲ್ಲಿ ರಾಮನ ಮೂರ್ತಿ ಕೆತ್ತನೆಗೆ ಅದೇ ಕಲ್ಲನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.