ನ್ಯೂಸ್ನಾಟೌಟ್: ತುಳುನಾಡಿನ ಸಂಸ್ಕೃತಿ, ನಂಬಿಕೆಯ ಆಧಾರದಲ್ಲಿ ತೆರೆ ಮೇಲೆ ಬಂದು ದೇಶದಲ್ಲಿ ಭರ್ಜರಿ ಪ್ರದರ್ಶನ ಕಂಡ ಕಾಂತಾರ ಸಿನೆಮಾ ಈಗ ಕೆಲವು ವಿದೇಶಿ ಭಾಷೆಗಳಲ್ಲೂ ರಿಲೀಸ್ ಆಗಲು ಸಜ್ಜಾಗುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ ಈ ಚಿತ್ರ ದೇಶದ ಹಲವು ಭಾಷೆಗಳಲ್ಲಿ ಮೂಡಿಬಂದಿದೆ. ಆದರೆ ಈಗ ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲು ಸಿದ್ಧತೆ ನಡೆಯುತ್ತಿದೆ.
ಕನ್ನಡದಲ್ಲಿ ತೆರೆ ಮೇಲೆ ಬಂದ ಸಿನಿಮಾ ಬಳಿಕ ತಮಿಳು, ತೆಲುಗು, ಮಲಯಾಳಂ, ತುಳು, ಹಿಂದಿ ಭಾಷೆಗೆ ಡಬ್ ಮಾಡಲಾಗಿತ್ತು. ಅಲ್ಲದೇ ಒಟಿಟಿ ಪ್ರೇಕ್ಷಕರಿಗಾಗಿ ಇಂಗ್ಲಿಷ್ ಭಾಷೆಯಲ್ಲೂ ಬಿಡುಗಡೆಯಾಗಿತ್ತು. ಈಗ ಕಾಂತಾರ ಇಟೆಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಆಗುತ್ತಿದೆ. ಇದರಿಂದ ಕನ್ನಡ ಚಿತ್ರಕ್ಕೆ ಮತ್ತೊಂದು ಹೆಗ್ಗಳಿಕೆ ಬಂದಿದೆ.
ವಿದೇಶಿ ಭಾಷೆಗಳಿಗೆ ಡಬ್ ಆಗುತ್ತಿರುವ ಬಗ್ಗೆ ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಬಹಿರಂಗಪಡಿಸಿದ್ದು, ಅಂತಾರಾಷ್ಟ್ರೀಯ ಪ್ರೇಕ್ಷಕರಿಂದ ಬೇಡಿಕೆ ಬಂದಿರುವುದಕ್ಕೆ ಧನ್ಯವಾದಗಳು. ಈ ವಿಷಯವನ್ನು ಸಿನಿಮಾ ಪ್ರೇಮಿಗಳಿಗೆ ತಿಳಿಸಲು ತುಂಬಾ ಖುಷಿಯಾಗುತ್ತಿದೆ ಎಂದು ಹೊಂಬಾಳೆ ಫಿಲ್ಮ್ಸ್ ಇಟಾಲಿಯನ್ ಭಾಷೆಯಲ್ಲಿ ಟ್ವೀಟ್ ಮಾಡಿದೆ.