ನ್ಯೂಸ್ ನಾಟೌಟ್: ಬಹುದಿನಗಳ ಬೇಡಿಕೆಯಾಗಿರುವ ಜಟ್ಟಿಪಳ್ಳ-ಕೊಡಿಯಾಲಬೈಲ್-ದುಗಲಡ್ಕ ರಸ್ತೆಯ ಅಭಿವೃದ್ಧಿಗೆ ಈಗಾಗಲೇ 50 ಲಕ್ಷ ರೂ.ಗಳ ಕಾಮಗಾರಿ ನಡೆದಿದ್ದು ವಿವಿಧ ಮೂಲಗಳಿಂದ ಇನ್ನೂ 65 ಲಕ್ಷ ರೂ.ಗಳ ಕಾಮಗಾರಿಗಳಿಗೆ ಮಂಜೂರಾತಿ ದೊರಕಿದೆ. ಶೀಘ್ರದಲ್ಲಿಯೇ ಈ ಕಾಮಗಾರಿಯು ಆರಂಭಗೊಳ್ಳಲಿದ್ದು ಈ ಭಾಗದ ಜನರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ತಿಳಿಸಿದ್ದಾರೆ.
ಪ್ರತಿಭಟನೆ ನಡೆದಿದ್ದ ಸಂದರ್ಭದಲ್ಲಿ 50 ಲಕ್ಷ ರೂ.ಗಳ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಂಡಿದ್ದು, 50 ಲಕ್ಷ ರೂ.ಗಳ ಕಾಮಗಾರಿಯನ್ನು ಮಾಡಲಿದ್ದೇವೆ ಎಂಬ ಭರವಸೆ ನೀಡಲಾಗಿತ್ತು. ಇದೀಗ ಮಳೆ ಹಾನಿ ದುರಸ್ತಿ ಯೋಜನೆಯಲ್ಲಿ 25 ಲಕ್ಷ ರೂ. ಮತ್ತು ಲೋಕೋಪಯೋಗಿ ಇಲಾಖೆಯಿಂದ 25 ಲಕ್ಷ ರೂ. ಮಂಜುರಾಗಿದ್ದು ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಇವಿಷ್ಟು ಮಾತ್ರವಲ್ಲದೇ ಮುಖ್ಯರಸ್ತೆಯ ತನಕ 15 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಹಾನಿಯಾದ ರಸ್ತೆಗೆ ನಗರ ಪಂಚಾಯತಿ ವತಿಯಿಂದ ಮರುಡಾಮರೀಕರಣ ನಡೆಸಲಾಗುವುದು. ಆದ್ದರಿಂದ ನಾಯಕರು ಕೊಟ್ಟ ಭರವಸೆಯಂತೆ ನಡೆದುಕೊಳ್ಳಲಿಲ್ಲ ಅನ್ನುವುದು ಸರಿಯಾದ ಮಾತಲ್ಲ. ಈ ರಸ್ತೆಗೆ ಈ ಮೊದಲು 50 ಲಕ್ಷ ರೂ. ಹಾಗೂ ಇದೀಗ 65 ಲಕ್ಷ ರೂ., ಒಟ್ಟು 1.15 ಲಕ್ಷ ರೂ.ಗಳ ಕಾಮಗಾರಿಯು ಈ ವರ್ಷ ನಡೆಯುತ್ತಿದ್ದು, ಪ್ರತಿಭಟನೆಯ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈಡೇರಿಸಲಾಗಿದೆ. ಸಂಪೂರ್ಣ ಎಂಟು ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿ ಮಾಡುವವರೆಗೆ ನಾವು ಬದ್ಧರಾಗಿದ್ದು ವಿವಿಧ ರೀತಿಯಲ್ಲಿ ಅನುದಾನಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ಸ್ಪಷ್ಟಪಡಿಸಿದ್ದಾರೆ.