ನ್ಯೂಸ್ ನಾಟೌಟ್: ಮುಸುಕುಧಾರಿ ಅಪರಿಚಿತ ವ್ಯಕ್ತಿಗಳು ಮಸೀದಿ ಇಮಾಮ್ ಒಬ್ಬರಿಗೆ ಹಲ್ಲೆಗೈದು ಅವರ ಗಡ್ಡವನ್ನು ಕತ್ತರಿಸಿರುವ ಘಟನೆ ಮಹಾರಾಷ್ಟ್ರದ ಅನ್ವ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆ:
ಭಾನುವಾರ ( ಮಾ.26 ರಂದು) ಮಸೀದಿಯೊಂದರಲ್ಲಿ ಇಮಾಮ್ ಆಗಿರುವ (ಧರ್ಮ ಗುರು) ಜಾಕಿರ್ ಸಯ್ಯದ್ ಖಾಜಾ ಅವರು ಖುರಾನ್ ಓದುತ್ತಿದ್ದರು. ಈ ವೇಳೆ ಮುಸುಕನ್ನು ಹಾಕಿರುವ ಅಪರಿಚಿತ ವ್ಯಕ್ತಿಗಳು ಇಮಾಮ್ ರ ಬಳಿ ಹೋಗಿ “ಜೈ ಶ್ರೀರಾಮ್” ಹೇಳಿ ಎಂದು ಬಲವಂತಪಡಿಸಿದ್ದಾರೆ. ಇಮಾಮ್ ಇದಕ್ಕೆ ಒಪ್ಪದ ಕಾರಣ ಮೂವರು ಅಪರಿಚಿತ ವ್ಯಕ್ತಿಗಳು ಮೊದಲು ಹಲ್ಲೆ ನಡೆಸಿ ಅಮಲು ಪದಾರ್ಥವನ್ನು ಹಾಕಿರುವ ಬಟ್ಟೆಯಿಂದ ಮುಖಕ್ಕೆ ಒತ್ತಿದ್ದಾರೆ. ಇದರಿಂದ ಇಮಾಮ್ ಪ್ರಜ್ಞೆ ತಪ್ಪಿದ್ದಾರೆ. ಇಮಾಮ್ ಗೆ ಪ್ರಜ್ಞೆ ಬಂದಾಗ ಅವರ ಗಡ್ಡವನ್ನು ಅಪರಿಚಿತ ವ್ಯಕ್ತಿಗಳು ಕತ್ತರಿಸಿರುವುದು ಗೊತ್ತಾಗಿದೆ.
ರಾತ್ರಿ 8 ಗಂಟೆಯ ವೇಳೆ ಮಸೀದಿಗೆ ಬಂದ ಜನ ಇಮಾಮ್ ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಅಪರಿಚಿತ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರು ಟ್ವಿಟರ್ ನಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ. ಸದ್ಯ ಗ್ರಾಮದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.