ನ್ಯೂಸ್ ನಾಟೌಟ್: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಟೀತ್ವಾಲ್ ಪ್ರದೇಶದಲ್ಲಿ ನಿರ್ಮಿಸಿದ ದೇವಾಲಯದಲ್ಲಿ ಬುಧವಾರ ಶಾರದಾ ದೇವಿಯ ವಿಗ್ರಹ ಸ್ಥಾಪನೆಯಾಗಲಿದೆ.
ವಿಶೇಷವೆಂದರೆ ಇಲ್ಲಿನ ದೇವಾಲಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಪಂಚಲೋಹದ ಶಾರದಾ ವಿಗ್ರಹವನ್ನು ಕರ್ನಾಟಕದ ಶೃಂಗೇರಿ ಮಠದಿಂದ ನೀಡಲಾಗಿದೆ. ಬುಧವಾರದ ಐತಿಹಾಸಿಕ ಧಾರ್ಮಿಕ ಕಾರ್ಯದ ಭಾಗವಾಗಲು ಟೀತ್ವಾಲ್ನಲ್ಲಿ ನೆರೆದಿದ್ದ ಹಲವಾರು ಭಕ್ತರು ಮತ್ತು ವಿದ್ವಾಂಸರಲ್ಲಿ, ಕರ್ನಾಟಕದ ಶೃಂಗೇರಿ ಮಠದ 100 ಮಂದಿ ಅರ್ಚಕರು ಪೂಜಾ ವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಗ್ರಹದ ಪ್ರತಿಷ್ಠಾಪನೆಯು ಕಾಶ್ಮೀರಿ ಹಿಂದೂ ಹೊಸ ವರ್ಷದ ಮೊದಲ ದಿನವಾದ ‘ನವ್ರೆಹ್’ ನೊಂದಿಗೆ ಹೊಂದಿಕೆಯಾಗುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 76 ವರ್ಷಗಳ ನಂತರ,ಕುಪ್ವಾರದ ಟೀತ್ವಾಲ್ ಪ್ರದೇಶದಲ್ಲಿ ದೇವಿಯ ದೇವಾಲಯ ನಿರ್ಮಿಸಲಾಗಿದೆ.
ದೇಶ ವಿಭಜನೆಯ ಮೊದಲು ಟೀತ್ವಾಲ್ ಶಾರದಾ ದೇವಿಯ ದೇವಾಲಯದ ಐತಿಹಾಸಿಕ ಮೂಲ ನೆಲೆಯಾಗಿತ್ತು. 1947ರಲ್ಲಿ ಕ್ರಿಶಗಂಗಾ ನದಿಯ ದಡದಲ್ಲಿರುವ ಮೂಲ ದೇವಾಲಯ ಮತ್ತು ಪಕ್ಕದ ಗುರುದ್ವಾರವನ್ನು ಬುಡಕಟ್ಟು ದಾಳಿಕೋರರು ನಾಶಪಡಿಸಿದ್ದರು. ತೀತ್ವಾಲ್ನಲ್ಲಿ ದೇವತೆಯ ವಿಗ್ರಹ ಸ್ಥಾಪಿಸುವುದು ಮತ್ತು ದೇವಳ ನಿರ್ಮಾಣವನ್ನು ಸ್ಥಳೀಯ ಮುಸ್ಲಿಮರು ಸ್ವಾಗತಿಸಿದ್ದಾರೆ. ಅವರು ಐತಿಹಾಸಿಕ ಮರುಸ್ಥಾಪನೆ ಈ ಪ್ರದೇಶದ ಘನತೆ ಮತ್ತು ಪವಿತ್ರ ಯಾತ್ರಾ ಸ್ಥಳವಾಗಿ ಮನ್ನಣೆಯನ್ನು ಮರಳಿ ಪಡೆಯುತ್ತದೆ ಎಂದು ನಂಬಿದ್ದಾರೆ. ಶಾರದಾ ಪೀಠವು ಪ್ರಾಚೀನ ಕಲಿಕೆಯ ಕೇಂದ್ರವಾಗಿದ್ದು, ಭಾರತ ಮಾತ್ರವಲ್ಲದೆ ಮಧ್ಯ ಏಷ್ಯಾದಿಂದಲೂ ವಿದ್ವಾಂಸರು ಬರುತ್ತಿದ್ದರು. 6ನೇ ಮತ್ತು 12ನೇ ಶತಮಾನಗಳ ಮಧ್ಯೆ ಶಾರದಾ ಪೀಠವು ಉಪ-ಖಂಡದ ಅತ್ಯಂತ ಪ್ರಮುಖ ದೇವಾಲಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿತ್ತು.