ನ್ಯೂಸ್ ನಾಟೌಟ್ : ಕೇರಳದ ಬದಿಯಡ್ಕ ಎಂಬಲ್ಲಿ ಯಾರೂ ವಾಸವಿಲ್ಲದ ಮನೆಯಲ್ಲಿ ನಕಲಿ ನೋಟುಗಳ ಸಂಗ್ರಹ ಪತ್ತೆಯಾಗಿದೆ ಎಂಬ ಸುದ್ದಿ ಇದೀಗ ಸದ್ದು ಮಾಡಿದೆ. ಪ್ರಮಾಣದ ನಿಷೇಧಿತ 1000 ರೂ.ನ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಘಟನೆ?
ಬದಿಯಡ್ಕ ಸಮೀಪದ ಶಾಫಿ ಎಂಬುವವರಿಗೆ ಸೇರಿದ ವಾಸವಿಲ್ಲದ ಮನೆಯಲ್ಲಿ ಈ ನಕಲಿ ನೋಟುಗಳ ಸಂಗ್ರಹ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೂ ಕಾರಣವಾಗಿದೆ. ಮನೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ರಹಸ್ಯ ಮಾಹಿತಿ ಮೇರೆಗೆ ಬದಿಯಡ್ಕ ಪೊಲೀಸರ ತಂಡ ದಾಳಿ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯಕ್ಕೆ ಪ್ರಕರಣದಲ್ಲಿ ಯಾರನ್ನು ಬಂಧಿಸಿಲ್ಲ. ಈ ಮನೆಯನ್ನು ವ್ಯಕ್ತಿಯೊಬ್ಬರು ಬಾಡಿಗೆಗೆ ಪಡೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದರ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕರ್ನಾಟಕಕ್ಕೆ ಕಳ್ಳಸಾಗಾಣಿಕೆ ಮಾಡಲು ತಾತ್ಕಾಲಿಕವಾಗಿ ಇಲ್ಲಿಗೆ ಕರೆತಂದಿರಬಹುದು ಅಥವಾ ಬೇರೆ ಬೇರೆ ರೀತಿಯಲ್ಲಿ ಸಾಗಾಟ ಮಾಡಿರಬಹುದು ಎಂಬ ಶಂಕೆಯೂ ಸ್ಥಳೀಯರಿಂದ ವ್ಯಕ್ತವಾಗಿದೆ.ಇದರ ಹಿಂದಿನ ಕಾರಣ ಅಸ್ಪಷ್ಟವಾಗಿದ್ದು,ವಶಪಡಿಸಿಕೊಂಡ ನೋಟುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.