ನ್ಯೂಸ್ ನಾಟೌಟ್: ಭಾನುವಾರ ಮಾರ್ಚ್ ೧೨ರಂದು ಗುಡಿಸಲೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಐವರು ಸಜೀವ ದಹನಗೊಂಡ ಘಟನೆ ಉತ್ತರ ಪ್ರದೇಶದ ಕಾನ್ಪುರ ದೇಹತ್ನಲ್ಲಿ ನಡೆದಿದೆ.
ರೂರಾ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ಮೌ ಬಂಜಾರದೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸತೀಶ್ ಕುಮಾರ್ ಸೇರಿ ಅವರ ಪತ್ನಿ ಕಾಜಲ್ ಮತ್ತು ಅವರ ಮೂವರು ಮಕ್ಕಳು ಮಲಗಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು, ಎಲ್ಲರೂ ಸಜೀವದಹನವಾಗಿದ್ದಾರೆ. ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ.
ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಜೊತೆಗೆ ಬೆಂಕಿ ನಂದಿಸಲು ಅಗ್ನಿಶಾಮಕ ಹರಸಾಹಸ ಪಟ್ಟರೂ ಕುಟುಂಬವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿಸಿದೆ. ಮಾಹಿತಿ ಪಡೆದ ಜಿಲ್ಲಾ ಮ್ಯಾಜಿಸ್ಟ್ರೇಟ್, ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಬೆಂಕಿಯ ಕಾರಣವನ್ನು ಕಂಡುಹಿಡಿಯಲು ವಿಧಿವಿಜ್ಞಾನ ತಂಡ ಮತ್ತು ಶ್ವಾನದಳವನ್ನು ಕರೆಸಲಾಗಿದ್ದು, ಪೊಲೀಸರ ತನಿಖೆ ಇನ್ನಷ್ಟು ಚುರುಕುಗೊಂಡಿದೆ.