ನ್ಯೂಸ್ ನಾಟೌಟ್: ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿಯ ಪಟ್ಟಿ ಬಿಡುಗಡೆಗೊಂಡಿದ್ದು, ಮಾರ್ಚ್ 22ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಒಟ್ಟು 106 ಮಂದಿಗೆ ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಕರ್ನಾಟಕದಿಂದ ಸಾಹಿತಿ ಎಸ್.ಎಲ್. ಭೈರಪ್ಪ ಮತ್ತು ಮಾಜಿ ಸಿಎಂ ಎಸ್.ಎಂ. ಕೃಷ್ಣ ಮತ್ತು ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಸೇರಿದಂತೆ ಎಂಟು ಮಂದಿ ಆಯ್ಕೆಯಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಮಹನೀಯರನ್ನು ಗೌರವಿಸುವ ನಿಟ್ಟಿನಲ್ಲಿ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತದೆ.
ಕರ್ನಾಟಕದಿಂದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಪ್ರಸಕ್ತ ಸಾಲಿನ ಪದ್ಮವಿಭೂಷಣ (ಸಾರ್ವಜನಿಕ ವ್ಯವಹಾರ ಕ್ಷೇತ್ರ), ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಪದ್ಮಭೂಷಣ (ಸಾಹಿತ್ಯ ಮತ್ತು ಶಿಕ್ಷಣ) ಮತ್ತು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಯವರ ಸಾಮಾಜಿಕ ಸೇವೆಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಖಾದರ್ ವಲ್ಲಿ ದೂದೇಕುಲ (ವಿಜ್ಞಾನ ಮತ್ತು ಇಂಜಿನಿಯರಿಂಗ್), ಎಂಎಸ್ ರಾಣಿ ಮಾಚಯ್ಯ (ಕಲೆ), ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಕಲೆ), ಶಾ ರಶೀದ್ ಅಹ್ಮದ್ ಕ್ವಾದ್ರಿ (ಕಲೆ), ಎಸ್ ಸುಬ್ರಮಣ್ (ಇತರ ಕ್ಷೇತ್ರ) ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.