ನ್ಯೂಸ್ ನಾಟೌಟ್: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದೇ (ಮಾ.29) ದಿನಾಂಕ ಘೋಷಣೆಯಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇಂದು ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ಕರೆದಿದ್ದು, ಬೆಳಗ್ಗೆ 11.30ರ ವೇಳೆಗೆ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಹಾಗಾಗಿ, ಇಂದಿನಿಂದ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ.
ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿದ್ದು, ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ದಿನಾಂಕ ಘೋಷಣೆ ಮಾಡಲಿದ್ದಾರೆ. ಇಂದು ಚುನಾವಣೆಯ ದಿನಾಂಕವನ್ನು ಪ್ರಕಟಿಸಲಿರುವ ಚುನಾವಣಾ ಆಯುಕ್ತರು ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ಮತದಾನದ ದಿನಾಂಕ ಹಾಗೂ ಫಲಿತಾಂಶದ ದಿನಾಂಕ ಪ್ರಕಟಿಸಲಿದ್ದಾರೆ.
ರಾಜ್ಯದಲ್ಲಿ ಎಷ್ಟು ಮತದಾರರಿದ್ದಾರೆ? ಚುನಾವಣಾ ವ್ಯವಸ್ಥೆ ಹೇಗಿರುತ್ತದೆ? ಎಷ್ಟು ಹಂತದಲ್ಲಿ ಮತದಾನ ನಡೆಯಲಿದೆ ಎಂಬುದರ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಇಂದಿನಿಂದ 45 ದಿನಗಳ ಒಳಗೆ ಮತದಾನ ನಡೆಯಬೇಕಿದ್ದು, ಬಹುತೇಕ ಮೇ ಮೊದಲ ವಾರ ಮತದಾನದ ದಿನಾಂಕ ನಿಗದಿಯಾಗಿರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.