ನ್ಯೂಸ್ ನಾಟೌಟ್: ಮದುವೆ ಸಮಾರಂಭದಲ್ಲಿ ಡಿಜೆ ಇದ್ದರೆ ಗತ್ತು-ಗಮ್ಮತ್ತು.ಡಿಜೆ ಸೌಂಡ್ ಕೇಳಿದ್ರೆ ಸಾಕು, ಅಜ್ಜ-ಅಜ್ಜಿಯರು ಕೂಡ ಕುಣಿಯಲಾರಂಭಿಸುತ್ತಾರೆ.ಆದರೆ ಇಲ್ಲೊಂದು ದುರಂತದಲ್ಲಿ ಡಿಜೆಯಿಂದಲೇ ಅನಾಹುತ ಉಂಟಾಗಿದೆ.
ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಜೋರಾದ ಡಿಜೆ ಮ್ಯೂಸಿಕ್ನ ಶಬ್ದದಿಂದ ಅಸ್ವಸ್ಥನಾದ ವರ ವೇದಿಕೆಯ ಮೇಲೆ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ವರ ಸುರೇಂದ್ರ ಕುಮಾರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರ ಸುರೇಂದ್ರ ಮತ್ತು ಅವರ ವಧು ಇಬ್ಬರೂ ತಮ್ಮ ಮದುವೆಗೆ ಸಿದ್ಧಪಡಿಸಲಾದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಂಪತಿ ಹಾರ ಬದಲಾಯಿಸಿಕೊಂಡಿದ್ದು, ಇತರ ಧಾರ್ಮಿಕ ವಿಧಿಗಳನ್ನು ಕೂಡ ನಡೆಸಿದರು. ವರದಿಯ ಪ್ರಕಾರ, ಸುರೇಂದ್ರ ತಮ್ಮ ಮದುವೆಯ ಮೆರವಣಿಗೆಯಲ್ಲಿ ಪ್ಲೇ ಆಗುತ್ತಿದ್ದ ಡಿಜೆಯ ಜೋರಾದ ಶಬ್ದದ ಬಗ್ಗೆ ಪದೇ ಪದೇ ದೂರು ನೀಡಿದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.
ಮದುವೆ ಸಮಾರಂಭದ ಕೆಲವೇ ಕ್ಷಣಗಳಲ್ಲಿ, ಸುರೇಂದ್ರ ವೇದಿಕೆಯ ಮೇಲೆ ಕುಸಿದುಬಿದ್ದರು. ನಂತರ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಅವರನ್ನು ಸೀತಾಮರ್ಹಿಗೆ ಕರೆದುಕೊಂಡು ಹೋಗುವಂತೆ ಸೂಚಿಸಲಾಯಿತು. ಆದರೆ, ವರ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.