ನ್ಯೂಸ್ ನಾಟೌಟ್: ಮಧ್ಯಪ್ರದೇಶದ ಇಂದೋರ್ನ ಬಾಲೇಶ್ವರ ಮಹಾದೇವ ದೇವಸ್ಥಾನದಲ್ಲಿ ಗುರುವಾರ ನೆಲ ಕುಸಿದ ಪರಿಣಾಮ ಅದರಡಿಯಲ್ಲಿದ್ದ 40 ಅಡಿ ಆಳದ ಬಾವಿಗೆ ಬಿದ್ದು ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.
ರಾಮ ನವಮಿಯಂದು ಜನರು ಪ್ರಾರ್ಥನೆ ಸಲ್ಲಿಸಲು ಬಾಲೇಶ್ವರ ಮಹಾದೇವ ದೇವಸ್ಥಾನಕ್ಕೆ ಬಂದಿದ್ದು, ಈ ವೇಳೆ ಮಧ್ಯಾಹ್ನ 12.30ರ ಸುಮಾರಿಗೆ ದುರ್ಘಟನೆ ನಡೆದಿದೆ. ಪುರಾತನ ದೇವಾಲಯದ ಮೇಲ್ಛಾವಣಿಯ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿಂತಿದ್ದರಿಂದ, ಈ ಭಾರ ಹೊರಲಾರದೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬಾವಿಯ ಮೇಲ್ಛಾವಣಿ ಕುಸಿದುಬಿದ್ದ ಕೂಡಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಆದರೆ ಘಟನೆ ಸಂಭವಿಸಿದ ಸ್ಥಳ ಕಿರಿದಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಎಂದು ತಿಳಿದುಬಂದಿದೆ. ಈ ದೇವಾಲಯವನ್ನು ಖಾಸಗಿ ಟ್ರಸ್ಟ್ ನಿರ್ವಹಿಸುತ್ತಿದ್ದು, ಈ ಹಿಂದೆಯ ದೇವಾಲಯದ ಅಭಿವೃದ್ಧಿಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ ಐದು ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ ಐವತ್ತು ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.