ನ್ಯೂಸ್ ನಾಟೌಟ್: ದರ್ಗಾ ಮತ್ತು ದೇವಾಲಯ ದಂಗಲ್ ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಜೋರಾಗಿ ಸುದ್ದಿ ಮಾಡುತ್ತಿದೆ, ಅದು ದರ್ಗಾವಲ್ಲ ದೇವಾಲಯ ಎಂದು ಹಿಂದೂ ಸಂಘಟನೆ ಹೋರಾಟಕ್ಕೆ ಸಿದ್ದತೆ ನಡೆಸಿವೆ.
ಚಿಕ್ಕಮಗಳೂರು ತಾಲೂಕಿನ ಮಹಜಿದ್ ಗ್ರಾಮದಲ್ಲಿರುವ ಹಜರತ್ ಸೈಯದ್ ಬೂದ್ ಷಾ ದರ್ಗಾವು ಚಂದ್ರಮೌಳೇಶ್ವರ ದೇವಾಲಯ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ. ಸಂಪೂರ್ಣ ಕಲ್ಲಿನಿಂದ ನಿರ್ಮಾಣವಾಗಿರುವ ಪುರಾತನ ದರ್ಗಾದ ಒಳಗಿರುವ ಪುರಾತನ ಕಲ್ಲಿನ ಕಂಬದಲ್ಲಿ ಹೂವಿನ ಮತ್ತು ಹಿಂದೂ ದೈವೀಕ ವಿಚಾರಗಳಿಗೆ ಸಂಬಂಧಪಟ್ಟ ಚಿತ್ರಗಳ ಕೆತ್ತನೆಗಳಿವೆ.
ಹೀಗಾಗಿ ದರ್ಗಾದೊಳಗೆ ಹಿಂದೂ ದೇವಾಲಯದ ಕುರುಹುಗಳಿರುವುದಾಗಿ ಶಂಕೆ ವ್ಯಕ್ತವಾಗಿದೆ ಎಂದು ಹಿಂದೂ ಸಂಘಟನೆಗಳು ತಿಳಿಸಿವೆ. ವಕ್ಫ್ ಬೋರ್ಡ್ ಅಧೀನದಲ್ಲಿರುವ ದರ್ಗಾದ ನವೀಕರಣಕ್ಕೆ 8 ಲಕ್ಷ ರೂಪಾಯಿ ಮಂಜೂರಾಗಿದೆ. ಆದರೆ ದರ್ಗಾದ ನವೀಕರಣ, ಗುಂಬಜ್ ಕಾಮಗಾರಿಗೆ ಹಿಂದೂ ಸಂಘಟನೆಗಳ ವಿರೋಧ ವ್ಯಕ್ತಪಡಿಸಿದ್ದು, ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸಲಾಗಿದೆ.
ಟಿಪ್ಪು ಸುಲ್ತಾನ್ ಕಾಲದಲ್ಲಿ ದೇವಾಲಯ ನಾಶ ಮಾಡಿ ದರ್ಗಾ ಮಾಡಲಾಗಿದೆ. ಕಟ್ಟೆಗದ್ದೆ ಹೆಸರನ್ನು ಮಹಜಿದ್ ಗ್ರಾಮವೆಂದು ಬದಲಾವಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಕಾರ್ಯಕರ್ತರು ಅಭಿಯಾನ ಆರಂಭ ಮಾಡಿದ್ದಾರೆ. ಇಂದಿನಿಂದ ದರ್ಗಾದಲ್ಲಿ ಉರುಸ್ ಆರಂಭವಾಗಲಿದ್ದು, ಹಿಂದೂ ಸಂಘಟನೆಗಳ ವಿರೋಧ ಹಿನ್ನೆಲೆ ಪೋಲಿಸ್ ಬಿಗಿ ಭದ್ರತೆ ವಹಿಸಲಾಗಿದೆ ಎಮದು ವರದಿ ತಿಳಿಸಿದೆ.